ಇನ್ಮುಂದೆ ‘1ನೇ ತರಗತಿ’ಗೆ ದಾಖಲಾಗಲು 6 ವರ್ಷ ಕಡ್ಡಾಯ – ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಇದುವರೆಗೆ 1ನೇ ತರಗತಿಗೆ ದಾಖಲಾಗೋದಕ್ಕೆ 5.5 ವರ್ಷವನ್ನು ನಿಗದಿ ಪಡಿಸಲಾಗಿತ್ತು. ಈ ವಯೋಮಿತಿಯನ್ನು ಶಿಕ್ಷಣ ಇಲಾಖೆ ಪರಿಷ್ಕರಿಸಿದೆ. ಇನ್ಮುಂದೆ 6 ವರ್ಷ ಮಕ್ಕಳಿಗೆ 1ನೇ ತರಗತಿಗೆ ದಾಖಲಾಗೋದಕ್ಕೆ ವಯಸ್ಸು ಜೂನ್ 1ಕ್ಕೆ ಪೂರೈಸಿರಬೇಕು ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಎಲ್ ಕೆಜಿ ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಹಾಗೂ 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳು ವಯೋಮಿತಿಯನ್ನು ನಿಗಧಿಪಡಿಸಿ ಸರ್ಕಾರ ಆದೇಶಿಸಲಾಗಿತ್ತು.

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ 1ನೇ ತರಗತಿ ಮಕ್ಕಳನ್ನು ದಾಖಲಾತಿ ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮ 20ರನ್ವಯ ಆಯಾ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಪೂರ್ವ ಪ್ರಾಥಮಿಕ ಎಲ್ ಕೆಜಿ 3 ವರ್ಷ 10 ತಿಂಗಳು, 1ನೇ ತರಗತಿಗೆ 5 ವರ್ಷ 10 ತಿಂಗಳು ಎಂಬುದಾಗಿ ದಿನಾಂಕ 13-01-2017ರಲ್ಲಿ ವಯೋಮಿತಿಯನ್ನು ನಿಗದಿ ಪಡಿಸಲಾಗಿತ್ತು.

ಆರ್ ಟಿ ಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಿ ಆದೇಶಿಸಿದ್ದಾರೆ.

 

About The Author