ಜಾತ್ರಗೆ ಹಣ ಪಾವತಿದಿದ್ದಕ್ಕೆ ಬಹಿಷ್ಕಾರ! ದೈವದ ಹೆಸರಿನಲ್ಲಿ ದಬ್ಬಾಳಿಕೆ!

ಬಾಗಲಕೋಟೆ (ಜಮಖಂಡಿ): ಹನುಮಂತ ದೇವರ ಓಕುಳಿ ಜಾತ್ರೆಯ ಪಟ್ಟಿ ಹಣ ಪಾವತಿಸದ ಕಾರಣಕ್ಕೆ ಏಳು ಕುಟುಂಬಗಳನ್ನು ಊರಿನಿಂದಲೇ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಿರಿಯರು ಹನುಮಂತ ದೇವರ ಜಾತ್ರೆಗೆ ಪ್ರತಿ ಕುಟುಂಬದಿಂದ ₹600 ಪಟ್ಟಿ ಹಣ ನಿಗದಿ ಮಾಡಿದ್ದರು. ಆದರೆ, ಕೆಲ ಕುಟುಂಬಗಳು ಈ ಹಣ ಪಾವತಿಸದ ಹಿನ್ನೆಲೆಯಲ್ಲಿ ಗಂಭೀರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಹಣ ಪಾವತಿಸದ ಕಾರಣದಿಂದ ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ ಹಾಗೂ ರಾಮಪ್ಪ ಬಟಕುರ್ಕಿ ಸೇರಿ ಒಟ್ಟು ಏಳು ಕುಟುಂಬಗಳನ್ನು “ದೈವಿಕ ಕಾರ್ಯಗಳಿಂದ ಹೊರಗಿಟ್ಟಿದ್ದೇವೆ” ಎಂದು ಗ್ರಾಮದಲ್ಲಿ ಡಂಗುರ ಸಾರಲಾಗಿದೆ.

ಈ ಕುಟುಂಬಗಳಿಗೆ ಪೂಜಾರಿಗಳು ಹಾಗೂ ಸ್ವಾಮಿಗಳು ಮನೆಗೆ ಹೋಗಬಾರದು, ಯಾವುದೇ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಹಾಗೂ ಸ್ಥಳೀಯ ಅಂಗಡಿಗಳಿಂದ ಸಹ ಸೇವೆ ಪಡೆಯಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್ 7ರಂದು ಗ್ರಾಮದಲ್ಲಿ ಓಕುಳಿ ಜಾತ್ರೆ ನಡೆಯಬೇಕಿದ್ದರೆ, ಏಪ್ರಿಲ್ 5 ರಂದೇ ಈ ಬಹಿಷ್ಕಾರ ಘೋಷಣೆ ಮಾಡಲಾಗಿದೆ. ಇದರಿಂದ ಗ್ರಾಮದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.

ಬಹಿಷ್ಕಾರಕ್ಕೆ ಒಳಗಾದ ಯಲ್ಲಪ್ಪ ಛಗಣ್ಣವರ ಅವರು ಈ ಕ್ರಮವನ್ನು ಖಂಡಿಸಿ ತಹಸೀಲ್ದಾರ್, ಎಸಿ ಹಾಗೂ ಡಿಸಿ ಅವರಿಗೆ ದೂರು ನೀಡಿದ್ದಾರೆ. ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿರುವ ಅವರು, ಈ ಕ್ರಮ ಕೈಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಎರಡೂ ಬದಿಗಳ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಹಣದ ಕಾರಣಕ್ಕೆ ಗ್ರಾಮದಲ್ಲಿ ನಡೆದ ಈ ಬಹಿಷ್ಕಾರ ಘಟನೆ ಸಾಮಾಜಿಕವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

About The Author