ಬೆಂಗಳೂರು: ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 7 ಕಾಲೇಜುಗಳನ್ನು ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರೊ.ಶಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್ ನಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬೆಂಗಳೂರಿನ ಎಸ್.ಕೆ.ಎಸ್.ಜೆ.ಐ.ಟಿ. ಕಾಲೇಜನ್ನು ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ ಆಗಿ ಬೆಳೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು
ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರ್ಯಪಡೆಯು ಈ ಕಾಲೇಜುಗಳ ಉನ್ನತೀಕರಣಕ್ಕೆ ಎರಡು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಈ ಕಾಲೇಜುಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಚಟುವಟಿಕೆಗಳನ್ನು ಸೂಚಿಸಲಿದೆ ಎಂದು ಸಚಿವರು ನುಡಿದಿದ್ದಾರೆ.
ಪರಿಣತರಾದ ಪ್ರೊ.ಎಲ್ ಎಸ್ ಗಣೇಶ್, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್ ರಾವ್, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್ ಮತ್ತು ಪ್ರೊ. ವೈ ನರಹರಿ ಅವರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.



