ಬೆಂಗಳೂರು ನಗರದ ಮಧ್ಯಭಾಗದಲ್ಲಿ ಸಿನಿಮಾಗಳನ್ನೇ ಮೀರಿಸುವ ದರೋಡೆ ನಡೆದಿದೆ. ಹಾಡಹಗಲೇ 7.11 ಕೋಟಿ ರೂ. ದರೋಡೆಯಾಗಿದೆ. ಇದು ಸಿನಿಮಾವಲ್ಲ, ರಿಯಲ್ ರಾಬರಿಯ ಮೆಗಾ ಆಪರೇಷನ್.
ಮಟ ಮಟ ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಬಂದ 6-7 ಜನರ ಗ್ಯಾಂಗ್, ಎಟಿಎಂಗೆ ಹಣ ಹಾಕಲು ತೆರಳುತ್ತಿದ್ದ ವಾಹನವನ್ನು ಪಕ್ಕಾ ಪ್ಲ್ಯಾನ್‌ನೊಂದಿಗೆ ಟಾರ್ಗೆಟ್ ಮಾಡಿದೆ. GJ 01 HT 9173 ನಂಬರ್ ಇರುವ ಹಣ ಸಾಗಣೆ ವಾಹನ ಸೌತ್ ಎಂಡ್ ಸರ್ಕಲ್‌ನತ್ತ ಸಾಗುತ್ತಿದ್ದಾಗ, ಜಯದೇವ ಡೇರಿ ಸರ್ಕಲ್‌ನಲ್ಲಿ ಗ್ಯಾಂಗ್ ಆರ್‌ಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ತಡೆದು ನಿಲ್ಲಿಸಿದೆ.
ಗನ್‌ಮ್ಯಾನ್‌ಗಳನ್ನೂ ಸಿಬ್ಬಂದಿಯನ್ನೂ ಹೆದರಿಸಿ ಕಾರಿನಿಂದ ಕೆಳಗಿಳಿಸಿ, ಚಾಲಕರನ್ನೂ ಜೊತೆಗೆ ಕರೆದುಕೊಂಡು ಹೋಗಿ, ಸಿನಿಮಾ ಸ್ಟೈಲ್ ಚೇಸ್ ನಡೆಸಲಾಗಿದೆ. ಇಲ್ಲಿಗೆ ಒಂದು ಹಂತಕ್ಕೆ ಪ್ಲ್ಯಾನ್ ಸಕ್ಸಸ್ ಆಗಿದೆ. ನಂತರ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ಕಾರನ್ನು ನಿಲ್ಲಿಸಿ, 7.11 ಕೋಟಿ ರೂ. ನಗದು ಚೀಲಗಳನ್ನು ಇನ್ನೋವಾಕ್ಕೆ ಲೋಡ್ ಮಾಡಿ ಗ್ಯಾಂಗ್ ಪರಾರಿಯಾಗಿದೆ.
ಸ್ಥಳಕ್ಕೆ ತಕ್ಷಣವೇ ಸುದ್ಧಗುಂಟೆಪಾಳ್ಯ ಪೊಲೀಸರು ದೌಡಾಯಿಸಿದ್ದು, ಫಿಂಗರ್‌ಪ್ರಿಂಟ್ ಎಕ್ಸ್ಪರ್ಟ್‌ಗಳು, ಡಾಗ್ ಸ್ಕ್ವಾಡ್, ತಾಂತ್ರಿಕ ತಂಡಗಳ ಪರಿಶೀಲನೆ ವೇಗ ಪಡೆದುಕೊಂಡಿದೆ. ಎಟಿಎಂ ವಾಹನದಲ್ಲಿ ನಾಲ್ವರು ಸಿಎಂಎಸ್ ಸಿಬ್ಬಂದಿ ಇದ್ದರು—ಡ್ರೈವರ್, ಇಬ್ಬರು ಗನ್ ಮ್ಯಾನ್ ಮತ್ತು ಒಬ್ಬ ಕ್ಯಾಶ್-ಲೋಡಿಂಗ್ ಸಿಬ್ಬಂದಿ. ಇವರನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಠಿಣ ವಿಚಾರಣೆ ಮಾಡಲಾಗುತ್ತಿದೆ.
ದರೋಡೆ ನಡೆದ ತಕ್ಷಣ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಎಲ್ಲಾ ಠಾಣೆಗಳಿಗೂ ಹೈಅಲರ್ಟ್ ಘೋಷಿಸಿದ್ದಾರೆ. ನಗರದ ಎಲ್ಲಾ ಎಂಟ್‌ರಿ–ಎಗ್ಜಿಟ್ ಪಾಯಿಂಟ್‌ಗಳಲ್ಲಿ ತಪಾಸಣೆ ಬಿಗಿಗೊಂಡಿದೆ. ಅಪರಾಧಿಗಳು ವೈಟ್‌ಫೀಲ್ಡ್ ಭಾಗದತ್ತ ಓಡಿರುವ ಶಂಕೆಯಿದ್ದು, ಕಮಿಷನರ್ ಖುದ್ದಾಗಿ ಸಿಸಿಟಿವಿಗಳನ್ನೂ, ಪರಾರಿಯಾದ ವಾಹನದ ಮಾರ್ಗವನ್ನೂ ಟ್ರಾಕ್ ಮಾಡುತ್ತಿದ್ದಾರೆ.
ಹೀಗಿರುವ ಮಾಹಿತಿ ಪ್ರಕಾರ, ದರೋಡೆ ಗ್ಯಾಂಗ್ ಬಳಸಿದ ಇನ್ನೋವಾ ಕಾರಿಗೆ ಡೂಪ್ಲಿಕೇಟ್ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. 7–8 ಮಂದಿ ಎಕ್ಸಪಿರಿಯನ್ಸ್ ದರೋಡೆಕೋರರ ತಂಡವೇ ಈ ಆಪರೇಷನ್ ಹಿಂದಿದೆ ಎನ್ನುವ ಅನುಮಾನ ಬಲವಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಆಯುಕ್ತರು ಹೇಳಿರುವುದರಿಂದ, ಈ ಕ್ರೈಂ ನಿಜ ಸಿನಿಮಾ ಸದ್ಯ ಕ್ಲೈಮ್ಯಾಕ್ಸ್ ಬರೋದೇ ಪ್ರಶ್ನೆಯಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




