Sunday, October 5, 2025

Latest Posts

71 ಮಂದಿ ಸುಟ್ಟು ಭಸ್ಮ! ಇಡೀ ದೇಶಕ್ಕೆ ಕರಾಳ ರಾತ್ರಿ

- Advertisement -

ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ.

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಪ್ರಯಾಣಿಕರ ಬಸ್ಸೊಂದು ಟ್ರಕ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು. ನೋಡ ನೋಡುತ್ತಲೇ ಜನರು ಸುಟ್ಟು ಕರಕಲಾಗಿದ್ದಾರೆ. 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರದ ವಕ್ತಾರ ಅಹ್ಮದುಲ್ಲಾ ಮುತ್ತಕಿ ಪೋಸ್ಟ್ ಮಾಡಿದ್ದಾರೆ. ಬಸ್‌ ದುರಂತದ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಬಸ್ ಇರಾನ್‌ನಿಂದ ಗಡಿಪಾರು ಮಾಡಲಾದ ಆಫ್ಘನ್ನರನ್ನು ಹೊತ್ತೊಯ್ಯುತ್ತಿತ್ತು ಮತ್ತು ಗಡಿ ದಾಟಿದ ನಂತರ ಕಾಬೂಲ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಪ್ರಾಂತೀಯ ಅಧಿಕಾರಿ ಮೊಹಮ್ಮದ್ ಯೂಸುಫ್ ಸಯೀದಿ ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣವೇನು ಅನ್ನೋದನ್ನು ಹೆರಾತ್ ಪ್ರಾಂತ್ಯದ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಅಪಘಾತಕ್ಕೆ ಬಸ್ಸಿನ ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ. ಎಲ್ಲಾ ಪ್ರಯಾಣಿಕರು ಪ್ರವಾಸಿ ಇಸ್ಲಾಂ ಕಲಾ ಎಂಬ ಸ್ಥಳದಿಂದ ಬಸ್ ಹತ್ತಿದ್ದರು ಎಂದು ಸಯೀದಿ ಹೇಳಿದರು. ಹೆರಾತ್ ನಗರದ ಹೊರಗಿನ ಗುಜಾರಾ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಟ್ರಕ್‌ನಲ್ಲಿ ಇಬ್ಬರು ಮತ್ತು ಬೈಕ್ನಲ್ಲಿ ಇಬ್ಬರು ಇದ್ದರು.

ಅಫ್ಘಾನಿಸ್ತಾನದಲ್ಲಿ ಸಂಚಾರ ಅಪಘಾತಗಳು ಸಾಮಾನ್ಯ. ದಶಕಗಳ ಸಂಘರ್ಷ, ಕೆಟ್ಟ ರಸ್ತೆಗಳು, ಹೆದ್ದಾರಿಗಳಲ್ಲಿ ಅಪಾಯಕಾರಿ ಚಾಲನೆ ಮತ್ತು ನಿಯಮಗಳನ್ನು ನಿರ್ಲಕ್ಷಿಸುವುದು ಸೇರಿದಂತೆ ರಸ್ತೆ ಅಪಘಾತಗಳಿಗೆ ಹಲವು ಕಾರಣಗಳಿವೆ. ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಬಸ್‌ಗಳು ಹಳೆಯವು ಮತ್ತು ತಾಂತ್ರಿಕವಾಗಿ ಅಸುರಕ್ಷಿತವಾಗಿವೆ ಮತ್ತು ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss