Saturday, July 5, 2025

Latest Posts

8 ಅಡಿ ದಂತದ ಭೋಗೇಶ್ವರ ಇನ್ನಿಲ್ಲ.!

- Advertisement -

ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತ್ತಿದ್ದ, ‘ಮಿಸ್ಟರ್ ಕಬಿನಿ’ ಖ್ಯಾತಿಯ ಮತ್ತು ಬೋಗೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಗಂಡಾನೆ ವಯೋಸಹಜ ಕಾರಣಗಳಿಂದಾಗಿ ಸಾವಿಗೀಡಾಗಿದೆ.

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಚ್ಚಗಸ್ತಿನ ಸುತ್ತನಹಳ್ಳಿ ಎಂಬ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ, ಆನೆ ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. 2-3 ದಿನಗಳಿಂದ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಆ ಆನೆಯ ದೇಹವನ್ನು ಪರಿಶೀಲಿಸಿದಾಗ ಯಾವುದೇ ಗಾಯಗಳ ಗುರುತು, ಕಾದಾಟದಿಂದ ಅಥವಾ ವಿಷಪ್ರಾಶನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಇಲಾಖೆಯ ಪಶು ವೈದಾಧಿಕಾರಿಗಳಾದ ಡಾ.ವಸೀಂ ಮಿರ್ಜಾ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಗುಂಡ್ರೆ ವಲಯ ಅರಣ್ಯ ವ್ಯಾಪ್ತಿಯ ವಲಯಾಧಿಕಾರಿ ಅಮೃತೇಶ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಆನೆಗೆ 60 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣದಿಂದ ಆನೆ ಮೃತಪಟ್ಟಿದೆ ಎಂಬುದು ತಿಳಿದುಬಂದಿದೆ. ಎರಡು ದಂತಗಳು ಸುರಕ್ಷಿತವಾಗಿದ್ದು ಭದ್ರತೆಯಲ್ಲಿ ಇಡಲಾಗಿದೆ. ಹೆಚ್ಚಿನ ತನಿಖೆಗಾಗಿ ದೇಹದ ಮಾದರಿಗಳನ್ನು ಮೈಸೂರಿನ ಪ್ರದೇಶಿಕ ವಿಧಿವಿಜ್ಙಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭೋಗೇಶ್ವರ ಆನೆ ಅತಿ ದೊಡ್ಡ ದಂತಗಳನ್ನು ಹೊಂದಿ, ಆಕರ್ಷಕವಾಗಿ ಕಾಣಿಸುತ್ತಿದ್ದರಿಂದ ಸಾಕಷ್ಟು ಪ್ರಚಾರಗಳಿಸಿತ್ತು. ಏಷ್ಯಾ ತಳಿಯ ಆನೆಗಳಲ್ಲಿಯೇ 8 ಅಡಿ ಉದ್ದದ ದಂತಗಳನ್ನು ಹೊಂದಿದ್ದು ವಿಶೇಷವಾಗಿದೆ. ಈ ಆನೆಯು ನಡೆದು ಬರುತ್ತಿದ್ದರೆ ಎರಡು ದಂತಗಳು ನೆಲವನ್ನು ತಾಕುತಿದ್ದವು. ಈ ಕಾರಣದಿಂದ ಅದು ಹುಲ್ಲನ್ನು ಸರಾಗವಾಗಿ ಬಾಯಿಗೆ ಹಾಕಿ ಕೊಳ್ಳುವುದಕ್ಕೆ ಆಗುತ್ತಿರಲಿಲ್ಲ.

ಈ ಎಲ್ಲ ಹಲವು ವಿಶೇಷಗಳ ಕಾರಣದಿಂದಾಗಿ ವನ್ಯಜೀವಿ ಪ್ರಿಯರ ನೆಚ್ಚಿನ ಆನೆಯಾಗಿತ್ತು. ಅಲ್ಲದೇ ಜನರಿಗೆ ಸಫಾರಿಯ ವೇಳೆಯೂ ಆಗಾಗ್ಗೆ ಕಾಣಿಸುವ ಮೂಲಕ ಕ್ಯಾಮೆರಾಗಳಲ್ಲಿ ಸೆರೆಯಾಗಿ ದೇಶವಲ್ಲದೇ ವಿಶ್ವದಾದ್ಯಂತ ಪ್ರಸಿದ್ದಿಯನ್ನು ಗಳಿಸಿತ್ತು. ಸೌಮ್ಯ ಸ್ವಾಭಾವದ ಈ ಆನೆ ಡಿ.ವಿ ಕುಪ್ಪೆ ವಲಯದಲ್ಲಿರುವ ಅರಣ್ಯ ಪ್ರದೇಶದ ಭೋಗೇಶ್ವರ ಗುಡಿ ಸಮೀಪದಲ್ಲಿ ಹೆಚ್ಚಾಗಿ ಇರುತ್ತಿತ್ತು. ಹೀಗಾಗಿ, ಅದಕ್ಕೆ ಭೋಗೇಶ್ವರ ಎಂಬ ಹೆಸರನ್ನು ಪ್ರವಾಸಿ, ವನ್ಯಪ್ರೇಮಿಗಳು ಇಟ್ಟಿದ್ದರು. ಸಫಾರಿ ವೇಳೆ ಅದನ್ನು ನೋಡಿದ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪೋಟೊಗಳನ್ನು ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ.

 

- Advertisement -

Latest Posts

Don't Miss