Sunday, October 5, 2025

Latest Posts

41 ಸಾವಿನ ಸತ್ಯಶೋಧನೆಗೆ ಸಿದ್ದ : ತೇಜಸ್ವಿ ಸೇರಿ 8 ಮಂದಿ ನಿಯೋಗ

- Advertisement -

ಕರೂರುನಲ್ಲಿ 41 ಮಂದಿ ಬಲಿಯಾದ ಕಾಲ್ತುಳಿತ ದುರಂತದ ಹಿನ್ನೆಲೆ, ಇದರ ಮೂಲ ಕಾರಣ ತಿಳಿಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 8 ಎನ್‌ಡಿಎ ಸಂಸದರ ನಿಯೋಗವೊಂದನ್ನು ರಚಿಸಿದ್ದಾರೆ. ಹೇಮಾಮಾಲಿನಿ ನೇತೃತ್ವದ ಈ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್, ಶಿವಸೇನೆಯ ಶ್ರೀಕಾಂತ್ ಶಿಂಧೆ, ಟಿಡಿಪಿಯ ಪುಟ್ಟ ಮಹೇಶ್ ಕುಮಾರ್, ಐಪಿಎಸ್ ಅಧಿಕಾರಿ ಬ್ರಿಜ್ ಲಾಲ್, ಅಪರಾಜಿತ ಸಾರಂಗಿ ಹಾಗೂ ರೇಖಾ ಶರ್ಮಾ ಸೇರಿದ್ದಾರೆ.

ಟಿವಿಕೆ ಪಕ್ಷದ ಪ್ರಚಾರ ಸಭೆಗೆ ನಟ ವಿಜಯ್ ಉದ್ದೇಶಪೂರ್ವಕವಾಗಿ ತಡವಾಗಿ ಆಗಮಿಸಿದ್ದರೂ, ಸ್ಥಳಕ್ಕೆ ಬಂದ ನಂತರವೂ ಕೆಲ ಹೊತ್ತು ವಾಹನದಲ್ಲಿಯೇ ಉಳಿದಿರುವುದು ಕಾಲ್ತುಳಿತಕ್ಕೆ ಕಾರಣವೆಂದು ಕರೂರು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ವಿಜಯ್ ಹೆಸರು ಕಾಣಿಸದಿದ್ದು, ಬದಲಾಗಿ ಟಿವಿಕೆ ಪಕ್ಷದ ಮೂವರು ಜಿಲ್ಲಾ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಭೆಗೆ ಹೆಚ್ಚಾದ ಜನಸಮೂಹವನ್ನು ಸೆಳೆಯುವ ಉದ್ದೇಶದಿಂದ ನಟ ವಿಜಯ್ ತಡವಾಗಿ ಆಗಮಿಸಿದ ಕಾರಣ ಬೆಳಗ್ಗೆಯಿಂದಲೇ ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಒಟ್ಟಾಗಿ ಮುಗಿಬಿದ್ದಿದ್ದಾರೆ. ಕಿರಿದಾದ ರಸ್ತೆಯಿಂದಾಗಿ ತೀವ್ರ ನೂಕುನುಗ್ಗಲು ಉಂಟಾಗಿದ್ದು, ಕೆಲವರು ಮರ ಹಾಗೂ ಬಸ್‌ಸ್ಟ್ಯಾಂಡ್ ಹತ್ತಿ ವಿಜಯ್ ನೋಡಲು ಮುಂದಾದಾಗ ಬಸ್‌ಸ್ಟ್ಯಾಂಡ್ ಕುಸಿದು ಬಿದ್ದು ಪರಿಸ್ಥಿತಿ ಹದಗೆಟ್ಟಿದೆ. ಈ ವೇಳೆ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ.

ಸಭೆಗೆ 10,000 ಜನರಿಗೆ ಮಾತ್ರ ಅನುಮತಿ ನೀಡಿದ್ದರೂ, 25,000ಕ್ಕೂ ಹೆಚ್ಚು ಜನರು ಆಗಮಿಸಿದ್ದರೆಂದು ಎಫ್‌ಐಆರ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಈ ನಡುವೆ ಪ್ರಕರಣದ ಬೆಳವಣಿಗೆಯಲ್ಲಿ ಟಿವಿಕೆ ಪಕ್ಷದ ಕರೂರು ಜಿಲ್ಲಾ ಕಾರ್ಯದರ್ಶಿ ಮಥಿಯಳಗನ್ ಅವರನ್ನು ಪೊಲೀಸರು ಬಂಧಿಸಿದ್ದು, ಇದು ಈ ಪ್ರಕರಣದಲ್ಲಿ ನಡೆದ ಮೊದಲ ಬಂಧನವಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss