ವೈದ್ಯೋ ನಾರಾಯಣ ಹರಿ.. ಅಂದ್ರೆ ವೈದ್ಯನು ಭಗವಂತ ನಾರಾಯಣನ ಸ್ವರೂಪವಾಗಿದ್ದಾನೆ. ರೋಗಿಯ ರೋಗವನ್ನು ಗುಣಪಡಿಸುವ ದೈವಿಕ ಶಕ್ತಿಯನ್ನು ಹೊಂದಿದ್ದಾನೆ ಅನ್ನೋ ನಂಬಿಕೆ ಇದೆ. ಆದರೆ ನಕಲಿ ವೈದ್ಯರ ಚೆಲ್ಲಾಟ, ಪ್ರಾಣ ಸಂಕಟವೇ ಆಗುತ್ತದೆ. ಕೋಲಾರದಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಆ ಮಾತಿಗೆ ಮತ್ತೊಂದು ಅಮಾಯಕ ಬಾಲಕಿ ಬಲಿಯಾಗಿದೆ.
ನಕಲಿ ವೈದ್ಯರು ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೇ ಕುತ್ತು ಬಂದಿದೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್ನಿಂದಲೇ ಮಗು ಸಾವನ್ನಪ್ಪಿದೆ ಎಂದು ಶಂಕೆ ವ್ಯಕ್ತವಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲೂರು ತಾಲ್ಲೂಕು ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿ ಜ್ವರದಿಂದ ಬಳಲುತ್ತಿದ್ದರು. ಆಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಿನಿಕ್‌ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ಬಾಲಕಿಗೆ ಚಿಕತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದೆ. ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ.
ಸುಮಾರು 3 ವರ್ಷಗಳ ಹಿಂದೆ ಇದೇ ಕೋಲಾರ ಜಿಲ್ಲೆಯಲ್ಲಿ 3 ಕ್ಲಿನಿಕ್‌ಗಳ ಮೇಲೆ ತಹಶೀಲ್ದಾರರು ದಾಳಿ ಮಾಡಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ನಕಲಿ ವೈದ್ಯರ 3 ಕ್ಲಿನಿಕ್‌ಗಳನ್ನೂ ಮುಚ್ಚಲಾಗಿತ್ತು. ಬೆಂಗಳೂರಿನಲ್ಲಿಯೂ ಕೋರಮಂಗಲದಲ್ಲಿ ಆಯುರ್ವೇದ ಓದಿಕೊಂಡಿದ್ದ ವೈದ್ಯರೊಬ್ಬರು ಕಳೆದ 10 ವರ್ಷಗಳಿಂದಲೂ ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬಯಲಾಗಿತ್ತು. ಅದರೊಂದಿಗೆ ಚರ್ಮ ಶಾಸ್ತ್ರದ ಬಗ್ಗೆ ಓದದೇ ಇರುವವರೂ ಬ್ಯೂಟಿ ಟ್ರೀಟ್ಮೆಂಟ್ ನೀಡುತ್ತಿದ್ದರು.
ವರದಿ : ಲಾವಣ್ಯ ಅನಿಗೋಳ

