Bengaluru News: ಬೆಂಗಳೂರಿನ ಕೆ.ಪಿ.ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಕೇಕ್ ತಿಂದು ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಆತನ ತಂದೆ ತಾಯಿಯ ಆರೋಗ್ಯ ಹದಗೆಟ್ಟಿದ್ದು, ಅವರಿಬ್ಬರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.
5 ವರ್ಷದ ಬಾಲಕ ಧೀರಜ್ ಸಾವನ್ನಪ್ಪಿದ್ದು, ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಸ್ವಿಗ್ಗಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್‌ಗೆ ನಿನ್ನೆ ಕೇಕ್ ಆರ್ಡರ್ ಕೊಡಬೇಕು ಎಂದು ಕರೆ ಬಂದಿತ್ತು. ಆದರೆ ಕೇಕ್ ಖರೀದಿಸಿದ ಬಳಿಕ, ಕೇಕ್ ಆರ್ಡರ್ ಕ್ಯಾನ್ಸಲ್ ಮಾಡಲಾಯಿತು. ಹಾಗಾಗಿ ಬಾಲರಾಜ್ ಕೇಕನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ.
ಊಟವಾದ ಬಳಿಕ, ಎಲ್ಲರೂ ಕೇಕ್ ಸೇವಿಸಿದ್ದಾರೆ. ಕೇಕ್ ಸೇವಿಸಿದ ಕೊಂಚ ಹೊತ್ತಿನಲ್ಲೇ ಬಾಲಕ ಧೀರಜ್ ಸಾವನ್ನಪ್ಪಿದ್ದು, ತಂದೆ ತಾಯಿಯ ಆರೋಗ್ಯ ಹದಗೆಟ್ಟಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಾ.ಆಂಜಿನಪ್ಪ ಇವರ ತಪಾಸಣೆ ಮಾಡಿದ್ದು, ಕೇಕ್ ತಿಂದು ಫುಡ್ ಪಾಯ್ಸನ್ ಆಗಿದೆ ಎಂದಷ್ಟೇ ಹೇಳಿದ್ದು, ಈ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತದೆ.
ಇವರ ಮನೆಯಲ್ಲಿ ನಾಲ್ಕು ಜನರಿದ್ದು, ತಂದೆ ತಾಯಿ ಮಗ ಮತ್ತು ಮಗಳು ವಾಸಿಸುತ್ತಿದ್ದರು. ಆದರೆ ಹೆಣ್ಣು ಮಗು ಅಜ್ಜಿ ಮನೆಗೆ ಹೋಗಿದ್ದ ಕಾರಣ, ಆ ಮಗು ಕೇಕ್ ತಿನ್ನದೇ ಬದುಕುಳಿದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.