ಆಯುಧ ಪೂಜೆಯಂದು ಒಡೆಯರ್ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆ: ಗಂಡು ಮಗುವಿಗೆ ಜನ್ಮ ನೀಡಿದ ರಾಣಿ

Mysuru News: ಮೈಸೂರು ಮಹಾರಾಜರು ಆಯುಧ ಪೂಜೆಯ ದಿನವೇ ಮತ್ತೊಂದು ಗಂಡು ಮಗುವಿನ ತಂದೆಯಾಗಿದ್ದಾರೆ. ಈ ಮೂಲಕ ನವರಾತ್ರಿಯ ಶುಭ ದಿನದಂದು ಒಡೆಯರ್ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿದೆ.

ರಾಣಿ ತ್ರಿಷಿಕಾ ಕುಮಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಈ ಮೂಲಕ ಆದ್ಯವೀರ್ ಅಣ್ಣನಾಗಿ ಭಡ್ತಿ ಪಡೆದಿದ್ದಾರೆ.

ಈ ಮೊದಲು ಮೈಸೂರು ರಾಜರಿಗೆ ಸಂತಾನವಿರಲಿಲ್ಲ. ಹಾಗಾಗಿ ಶ್ರೀಕಂಠದತ್ತ ಒಡೆಯರ್ ನಿಧನದ ಬಳಿಕ, ರಾಜಮಾತೆ ಪ್ರಮೋದಾದೇವಿ, ಯದುವೀರ್ ಅವರನ್ನು ದತ್ತು ಪಡೆದು, ಅವರನ್ನೇ ಮೈಸೂರು ಸಿಂಹಾಸನಕ್ಕೇರಿಸಿದರು. ಇದಾದ ಬಳಿಕ ಯದುವೀರ್ ಮತ್ತು ತ್ರಿಷಿಕಾ ವಿವಾಹ ನೇರವೇರಿತು. ಬಳಿಕ ಎಲ್ಲ ದೇವರುಗಳಿಗೆ ಹರಕೆ ಹೊತ್ತಿದ್ದು, ಯುದುವೀರ್‌ಗೆ ಪುತ್ರ ಸಂತಾನ ಪ್ರಾಪ್ತಿಯಾಯಿತು.

ಮೈಸೂರು ರಾಜರು ಮಾಡಿದ ತಪ್ಪಿಗೆ ಅಲಮೇಲಪ್ಪ ಶಾಪ ನೀಡಿದ್ದಳು. ತಲಕಾಡು ಮರುಳಾಗಲಿ, ಕಾಳಿಂದಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡಿದ್ದಳು. ಹಾಗಾಗಿ ಶ್ರೀಕಂಠದತ್ತ ಒಡೆಯರ್ ತನಕ ಯಾವ ರಾಜರಿಗೂ ಸಂತಾನವಿರಲಿಲ್ಲ. ಬಳಿಕ ರಾಜಮಾತೆ ಯದುವೀರ್‌ನ್ನು ದತ್ತು ಪಡೆದರು.

ದತ್ತು ಪುತ್ರನಿಗೆ ಅಲಮೇಲಮ್ಮನ ಶಾಪ ತಟ್ಟದೇ, ಪುತ್ರ ಪ್ರಾಪ್ತಿಯಾಯಿತು. ಅಲ್ಲಿಗೆ ಅಲಮೇಲಮ್ಮನ ಶಾಪ ವಿಮೋಚನೆಯಾಗಿದೆ ಎಂದರ್ಥ. ಇದೀಗ ನವರಾತ್ರಿಯ ಶುಭ ಸಂದರ್ಭದಲ್ಲೇ ತ್ರಿಷಿಕಾ ಕುಮಾರಿ ಮತ್ತೋರ್ವ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

About The Author