Political News: ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ವೆಂಕಟಸ್ವಾಮಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಸಕ ಸ್ಥಾನಕ್ಕೇರಿದ ತಕ್ಷಣ, ದುರಂಹಾಕರ ಬರಬಾರದು, ನಾವು ಪರಿಶಿಷ್ಟ ವರ್ಗದವರು ಮನಸ್ಸು ಮಾಡಿದ್ರೆ, ಜೈಲಿಗೆ ಕಳುಹಿಸುವ ತಾಕತ್ತು ಇದೆ ಎಂದು ಹೇಳಿದ್ದಾರೆ.
ಅಲ್ಲದೇ, ನಮ್ಮ ಸಂಘಟನೆಯ ಮುಖಂಡರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಕೇವಲವಾಗಿ ಮಾತನಾಡಿದ್ದಾರೆ. ರೋಲ್‌ಕಾಲ್ ಎನ್ನುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅಲ್ಲದೇ, ನಾವು ಮಾಡಿದ ಓಬವ್ವ ಜಯಂತಿಗೂ ಶಾಸಕರು ಬರಲಿಲ್ಲ. ಆದರೆ ಅವರು ನಮ್ಮ ಸಂಘಟನೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದಲಿತರ ಬಗ್ಗೆ ದಲಿತ ಸಂಘಟನೆಯ ಬಗ್ಗೆ ಕೇವಲವಾಗಿ ಮಾತನಾಡಿದರೆ, ನಾವು ಅವರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ವೆಂಕಟಸ್ವಾಮಿ ಹೇಳಿದರು.
ಕೂಡಲೇ ಶಾಸಕರು ಈ ಬಗ್ಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ, ಹೋರಾಟದ ಸ್ವರೂಪ ಬದಲಾಗುತ್ತದೆ. ಈ ಹಿಂದೆ ಜಿಲ್ಲಾಧಿಕಾರಿಯೊಬ್ಬರು, ದಲಿತರ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ, ಅವರನ್ನು ಜಿಲ್ಲೆ ಬಿಟ್ಟು ಹೋಗುವಂತೆ ಮಾಡಿದ್ದೆವು. ಅದೇ ರೀತಿ ನಿಮ್ಮನ್ನೂ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.