ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಕೊಟ್ಟ ನೋಟಿಸ್ ವಾಪಸ್ ಪಡೆಯಲಾಗುವುದು ಅಂತ ಕೈಗಾರಿಕಾ ಸಚಿವ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ಗುರುವಾರ ಮಾತನಾಡಿದ ಎಂಬಿ ಪಾಟೀಲ್, ‘ಏಪ್ರಿಲ್‌ನಲ್ಲಿ ಕೊಟ್ಟ ನೋಟಿಸ್ ಇದಾಗಿದೆ. ಕೆರೆಯಿಂದ ನೀರು ಬಳಕೆ ಮಾಡಿರುವುದಕ್ಕೆ ಈ ನೋಟಿಸ್ ಕೊಡಲಾಗಿದೆ. ಆದರೆ ಅದನ್ನು ವಾಪಸ್ ಪಡೆದುಕೊಳ್ಳುತ್ತೇವೆ’ ಎಂದರು.
ಸಿದ್ದಗಂಗಾ ಮಠ ವಿಶ್ವಕ್ಕೆ ಮಾದರಿಯಾದ ಮಠವಾಗಿದೆ. ಮಕ್ಕಳಿಗೆ ಶಿಕ್ಷಣ, ದಾಸೋಹ ಕೊಡುತ್ತಿರುವ ಮಠವಾಗಿದೆ. ಈ ಬಗ್ಗೆ ಮುಖ್ಯ ಇಂಜಿನಿಯರ್ ಸ್ವಾಮೀಜಿ ಜೊತೆ ಮಾತನಾಡಿದ್ದಾರೆ ಎಂದು ಸಚಿವರು ವಿವರ ನೀಡಿದರು.ಸಿದ್ದಗಂಗಾ ಮಠ ನೀರನ್ನು ಬಳಸಿಕೊಂಡರೂ ತಪ್ಪಲ್ಲ. ಈ ಕುರಿತಾಗಿ ಸ್ವಾಮೀಜಿ ಜೊತೆಗೆ ಮಾತನಾಡುತ್ತೇನೆ. ಒಂದು ವೇಳೆ ನೀರು ಬಳಸದೆ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತ ಅವರು ತಿಳಿಸಿದರು.
ಸದ್ಯ ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ನೀರಾವರಿ ಯೋಜನೆಯ ವಿದ್ಯುತ್ ಬಿಲ್ 70 ಲಕ್ಷ ರೂ. ಪಾವತಿಸಿ ಎಂದು ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಪತ್ರ ಬರೆದಿತ್ತು. ಅಲ್ಲದೆ ಮೌಖಿಕವಾಗಿ ಬಿಲ್ ಪಾವತಿಸಿ ಎಂದು ಮಂಡಳಿ ಅಧಿಕಾರಿಗಳು ಮಠಕ್ಕೆ ಸೂಚನೆ ನೀಡಿದ್ದರು. ‘ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ನೀರಾವರಿ ಯೋಜನೆಯೊಂದರ ವಿದ್ಯುತ್ ಬಿಲ್ ಅನ್ನು ನೀವು ಭರಿಸಲು ಕೋರಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬರೋಬ್ಬರಿ 70.31 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕು ಅಂತ ಇದರಲ್ಲಿ ಹೇಳಲಾಗಿದೆ.
ತುಮಕೂರು ತಾಲ್ಲೂಕು ಹೊನ್ನೇನಹಳ್ಳಿ ಕೆರೆಯಿಂದ ಕೆಐಎಡಿಬಿ ಪೈಪ್ ಲೈನ್ ಮೂಲಕ ದೇವರಾಯನಪಟ್ಟಣಕ್ಕೆ ನೀರು ತರಿಸಿತ್ತು. ಕೆರೆಯು ಸಿದ್ದಗಂಗಾ ಮಠದ ಸನಿಹದಲ್ಲೇ ಇದ್ದು, 2023-24ನೇ ಸಾಲಿನಲ್ಲಿ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಮಠಕ್ಕೆ ನೀರು ನೀಡಲಾಗಿತ್ತು. ಸಿದ್ದಗಂಗಾ ಮಠ ಈ ನೀರನ್ನೇ ದೈನಂದಿನ ಕಾರ್ಯಗಳಿಗೆ ಬಳಸಿಕೊಳ್ಳುತ್ತಿತ್ತು. ಹೀಗಾಗಿ, ಈ ನೀರಿಗೆ ಹಣ ಪಾವತಿಸುವಂತೆ ಕೆಐಎಡಿಬಿಯು ಆಗ್ರಹಿಸಿದೆ.
ಈ ಸಂಬಂಧ 8 ತಿಂಗಳ ಹಿಂದೆ ಸಿದ್ದಗಂಗಾ ಮಠಕ್ಕೆ ಪತ್ರ ಬರೆಯಲಾಗಿತ್ತು. ಮಠ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೌಖಿಕವಾಗಿ ಬಿಲ್ ಮೊತ್ತ ಪಾವತಿಸುವಂತೆ ಮಠದ ಆಡಳಿತ ಮಂಡಳಿಗೆ ಸೂಚಿಸುತ್ತಿದ್ದರು. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದ್ದು, ಇದೇ ನೀರನ್ನು ಸಿದ್ದಗಂಗಾ ಮಠ ಬಳಸಿಕೊಂಡಿದೆ ಅಂತ ಹೇಳಲಾಗಿದೆ.