BENGALURU: ಆಟೋ ಪ್ರಯಾಣದರ ಏರಿಕೆ..? ಅನುಮತಿ ಕೊಡುತ್ತಾ ಸರ್ಕಾರ..?

ಬೆಂಗಳೂರು ನಗರದಲ್ಲಿ ಆಟೊ ಪ್ರಯಾಣ ದರ ಪರಿಷ್ಕರಣೆ ಸಂಬಂಧ ಚರ್ಚೆಗಳು ನಡೆದಿದ್ವು. ಸದ್ಯ ಹೊಸ ವರ್ಷದಿಂದ ಪ್ರಯಾಣ ದರವು 5 ರೂ. ನಿಂದ 10 ರೂ.ವರೆಗೆ ಏರಿಕೆ ಮಾಡೋದಕ್ಕೆ ಸರ್ಕಾರ ಚಿಂತನೆ ನಡೆಸ್ತಿವೆ.

ಆಟೊರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಲಾಗಿರುವ ಸಮಿತಿ ಸಭೆಯು ಡಿ. 23 ರಂದು ನಿಗದಿಯಾಗಿತ್ತು. ಸಭೆಗೆ ನಗರದಲ್ಲಿನ ಎಲ್ಲ ಆಟೊರಿಕ್ಷಾ ಯೂನಿಯನ್‌ಗಳು ಹಾಗೂ ಸಂಘ-ಸಂಸ್ಥೆಗಳನ್ನು ಬೆಂಗಳೂರು ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಆಹ್ವಾನಿಸಿದ್ದರು. ಆದರೆ, ಕಾರಣಾಂತರಗಳಿಂದ ಸಭೆ ಮುಂದೂಡಿಕೆಯಾಗಿದೆ.

ಡೀಸೆಲ್‌, ಗ್ಯಾಸ್‌, ಬಿಡಿ ಭಾಗಗಳು ಹಾಗೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆ ಆಟೊ ಪ್ರಯಾಣದ ಕನಿಷ್ಠ ದರವನ್ನು ಹೆಚ್ಚಿಸಬೇಕು. ಮೊದಲ ಎರಡು ಕಿ.ಮೀ ದೂರದ ಪ್ರಯಾಣಕ್ಕೆ ಸದ್ಯ 30 ರೂ. ನಿಗದಿಪಡಿಸಿದ್ದು, ಇದನ್ನು 40 ರೂ.ಗಳಿಗೆ ಹೆಚ್ಚಿಸಬೇಕು. ನಂತರದ ಪ್ರತಿ ಕಿ.ಮೀ ದರವನ್ನು 15 ರೂ. ನಿಂದ 20 ರೂ.ಗಳಿಗೆ ಏರಿಕೆ ಮಾಡಬೇಕೆಂದು ಆಟೊರಿಕ್ಷಾ ಚಾಲಕರು ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ದರ ಹೆಚ್ಚಳಕ್ಕೆ ಎಲ್ಲಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

 

‘‘ ನಗರದಲ್ಲಿ 2 ಲಕ್ಷಕ್ಕೂ ಅಧಿಕ ಆಟೊಗಳಿದ್ದು, ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಸುಮಾರು 10 ಲಕ್ಷ ಮಂದಿ ಆಟೊದಿಂದ ಬರುವ ಆದಾಯವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪೆಟ್ರೋಲ್‌, ಗ್ಯಾಸ್‌ ದರ ಹಲವು ಸಲ ಹೆಚ್ಚಳವಾಗಿದೆ. ಪ್ರಸ್ತುತ ಎಲ್‌ಪಿಜಿ ದರವು ಕೆ.ಜಿ ಗೆ 61.56 ರೂ. ಇದೆ. ಅಗತ್ಯ ವಸ್ತುಗಳು, ಆಟೊರಿಕ್ಷಾಗಳ ಬಿಡಿಭಾಗಗಳು, ಟಯರ್‌, ವಿದ್ಯುತ್‌, ಅಡುಗೆ ಅನಿಲ ಬೆಲೆಯೂ ಜಾಸ್ತಿಯಾಗಿದ್ದು, ಆಟೊ ಚಾಲಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಪ್ರಯಾಣ ದರ ಹೆಚ್ಚಿಸಲು ಮನವಿ ಸಲ್ಲಿಸಲಾಗಿದೆ,’’ ಅಂತ ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್‌ ಒತ್ತಾಯಿಸಿದರು.

‘‘ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 202 1ರಲ್ಲಿ ದರ ಪರಿಷ್ಕರಣೆ ಮಾಡಿ, ಕನಿಷ್ಠ ದರವನ್ನು 30 ರೂ. ಮತ್ತು ನಂತರದ ಪ್ರತಿ ಕಿ.ಮೀಗೆ 15 ರೂ. ದರ ನಿಗದಿ ಮಾಡಿತ್ತು. 2 ವರ್ಷದ ಅವಧಿಗೆ ದರ ಪರಿಷ್ಕರಿಸಲಾಗಿತ್ತು. ಈಗಾಗಲೇ ಮೂರು ವರ್ಷಗಳು ಪೂರ್ಣಗೊಂಡಿವೆ. ಈ ಮಧ್ಯೆ ಯಾವುದೇ ಪರವಾನಗಿ ಪಡೆಯದೆ ಬೈಕ್‌ ಟ್ಯಾಕ್ಸಿಗಳು ಅಕ್ರಮವಾಗಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಇದರಿಂದ ಆಟೊ ಚಾಲಕರ ದುಡಿಮೆಗೆ ಹೊಡೆತ ಬಿದ್ದಿದೆ,’’ ಅಂತ ಹೇಳಿದರು.

About The Author