ಬೆಳಗಾವಿಯಲ್ಲಿ ಸಿಡಿಬ್ಲ್ಯೂಸಿ ಸಭೆ ನಡೆಯುತ್ತಿರುವ ಹೊತ್ತಿನಲ್ಲೇ ಇಂಡಿಯಾ ಮೈತ್ರಿಕೂಟದಲ್ಲಿ ಮತ್ತೆ ಬಿಕ್ಕಟ್ಟು ಎದ್ದು ಕಾಣಿಸಿಕೊಂಡಿದೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ರನ್ನ ದೇಶವಿರೋಧಿ ಅಂತ ಕರೆದಿರುವ ಹಿರಿಯ ನಾಯಕ ಅಜಯ್ ಮಾಕನ್ ವಿರುದ್ಧ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷವನ್ನು ಮೈತ್ರಿಕೂಟದಿಂದ ಕೈಬಿಡುವಂತೆ ಮಿತ್ರಪಕ್ಷಗಳನ್ನು ಒತ್ತಾಯಿಸುವುದಾಗಿ ಎಎಪಿ ಎಚ್ಚರಿಸಿದೆ. ಇದಕ್ಕೆ ಕಾಂಗ್ರೆಸ್ ನ ದೆಹಲಿ ಘಟಕವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ಹಾಗೂ ಎಎಪಿಯನ್ನ ಗುರಿಯಾಗಿಸಿಕೊಂಡು ಮಾಕನ್ 12 ಅಂಶಗಳ ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ರು. ಕೇಜ್ರೀವಾಲ್ ದೇಶವಿರೋಧಿ. ಏಕರೂಪ ನಾಗರಿಕೆ ಸಂಹಿತೆ ಮತ್ತು ಸಂವಿಧಾನದ 370 ನೇ ವಿಧಿಯ ರದ್ಧತಿ ಸಂದರ್ಭದಲ್ಲಿ ಬಿಜೆಪಿಗೆ ಸೈದ್ದಾಂತಿಕ ಬೆಂಬಲ ನೀಡಿದ್ರು ಅಂತ ಆರೋಪ ಮಾಡಿದ್ರು. ದೆಹಲಿ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಜತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆಯೇ ಅಂತ ಎಎಪಿ ಪ್ರಶ್ನಿಸಿದೆ.
ಇನ್ನು ಕೇಜ್ರೀವಾಲ್ ಹಾಗೂ ಮನೀಷ್ ಸಿಸೋಡಿಯಾ ವಿರುದ್ಧ ಕಣಕ್ಕಿಳಿದಿರುವ ಸಂದೀಪ್ ದೀಕ್ಷೀತ್ ಹಾಗೂ ಫರ್ಹಾದ್ ಸೂರಿ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಯಿಂದ ಹಣ ಪಡೆದಿದ್ದಾರೆ ಅಂತ ಎಎಪಿ ಆರೋಪ ಮಾಡಿದೆ. ಮಾಕನ್ ಹಾಗೂ ದೆಹಲಿಯ ಇತರ ನಾಯಕರೂ ಬಿಜೆಪಿಯನ್ನು ರಾಷ್ಟ್ರ ವಿರೋಧಿ ಅಂತ ಯಾಕೆ ಕರೀತಿಲ್ಲ ಅಂತ ಪ್ರಶ್ನಿಸಿರೋ ಪಕ್ಷವು, ಕೇಜ್ರೀವಾಲ್ ಹಾಗೂ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಮೌನವಾಗಿರೋದು ಯಾಕೆ ಅಂತಲೂ ಕೇಳಿದೆ.
ಇನ್ನು ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅತಿಶಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ,ಮಾಕನ್ ಹೇಳಿಕೆಗೆ ತೀವ್ರ ಅಸಮಾಧಾನ ಹೊರ ವ್ಯಕ್ತಪಡಿಸಿದ್ರು. ಅಲ್ಲದೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೆಹಲಿ ಹಾಗೂ ಚಂಡೀಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೇಜ್ರೀವಾಲ್ ಪ್ರಚಾರ ನಡೆಸಿದ್ರು. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ರೂ ಕಾಂಗ್ರೆಸ್ ವಿರುದ್ಧ ಕೇಜ್ರೀವಾಲ್ ಟೀಕೆ ಮಾಡಿರಲಿಲ್ಲ ಅಂತ ಅಂದ್ರು.
ಬಳಿಕ ಸುದ್ದಿಗಾರರ ಜೊತೆಗೆ ದೆಹಲಿ ಕಾಂಗ್ರೆಸ್ ದೇವೇಂದ್ರ ಯಾದವ್ ಮಾತನಾಡಿ ಎಎಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ರು. ಕಾಂಗ್ರೆಸ್ ಬಿಡುಗಡೆ ಮಾಡಿರುವ ಶ್ವೇತಾಪತ್ರದಿಂದ ಎಎಪಿಯ ವಿಶ್ವಾಸಾರ್ಹತೆ ತಳಮಟ್ಟಕ್ಕೆ ಕುಸಿದಿದೆ ಎಂದ್ರು. ಭ್ರಷ್ಟ ನಾಯಕರ ಗುಂಪು ತಮ್ಮ ಛಿದ್ರಗೊಂಡ ವರ್ಚಸ್ಸು ಹಾಗೂ ಮತದಾರರ ಬೆಂಬಲ ಗಳಿಸಲು ಹತಾಶರಾಗಿ ಪ್ರಯತ್ನಿಸುತ್ತಿದ್ದಾರೆ ಅಂದಿದ್ದಾರೆ.