ಸಂಕ್ರಾಂತಿ ನಂತರ ಜೆಡಿಎಸ್ ನಲ್ಲಿ ಸಂಕ್ರಮಣ ಸಂಭವಿಸೋ ಸಾಧ್ಯತೆ ಇದೆ. ಯಾಕಂದ್ರೆ ಹೊಸ ರಾಜ್ಯಾಧ್ಯಕ್ಷರು ಮೂವರು ಕಾರ್ಯಾಧ್ಯಕ್ಷರ ಆಯ್ಕೆ ಮೂಲಕ ಸಂಘಟನೆಗೆ ಬಲ ತುಂಬಲು ಜೆಡಿಎಸ್ ಪಕ್ಷವನ್ನು ಸಜ್ಜುಗೊಳಿಸಲಾಗ್ತಿದೆ.
ಹೌದು ಸದ್ಯ ರಾಜ್ಯಾಧ್ಯಕ್ಷ ಹುದ್ದೆಗೆ ನಿಖಿಲ್ ಕುಮಾರಸ್ವಾಮಿ ಆಯ್ಕೆ ಬಹುತೇಕ ಖಚಿತ ಅಂತ ಹೇಳಲಾಗ್ತಿದೆ. ಇನ್ನು ನಿಖಿಲ್ ಬಡ್ತಿಯಿಂದ ತೆರವಾಗುವ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶರಣಗೌಡ ಕಂದಕೂರು ಅವ್ರನ್ನು ಆಯ್ಕೆ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿರುವ ಜಾತ್ಯಾತೀತ ಜನತಾದಳ ಉಪಚುನಾವಣೆ ಹಿನ್ನಲೆಯಲ್ಲಿ ಅಲ್ಪ ವಿರಾಮ ನೀಡಿತ್ತು. 2025ರ ಜನವರಿ 2ನೇ ವಾರದಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿ ಸಾಂಸ್ಥಿಕ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಲು ಚಿಂತನೆಗಳು ನಡೆದಿವೆ.
ಪ್ರಸ್ತುತ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಪ್ರತೀ ಚುನಾವಣೆಯಲ್ಲೂ ಪ್ರಯೋಗಕ್ಕೆ ಒಡ್ಡುತ್ತಾ ಬಂದಿದ್ದ ಜೆಡಿಎಸ್, ಸಂಘಟನೆಯ ಬೇರು ಗಟ್ಟಿಗೊಳಿಸಲು ನಿಖಿಲ್ ಹೆಗಲ ಮೇಲೆ ಪ್ರವಾಸದ ಹೊಣೆಗಾರಿಕೆಯನ್ನೂ ಹೊರಿಸಿತ್ತು. ಸಾರ್ವತ್ರಿಕ ಚುನಾವಣೆ, ಉಪಚುನಾವಣೆಗಳಲ್ಲಿ ಸರಣಿ ಸೋಲುಂಡರೂ ಸಂಘಟನಾತ್ಮಕವಾಗಿ ನಿಖಿಲ್ ಫಲಪ್ರದರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮತ್ತೊಂದು ಜವಾಬ್ದಾರಿ ಹೊರಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಿದ್ಧರಾಗಿದ್ದಾರೆ. ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್‌ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಅಣಿಯಾಗಿದ್ದಾರೆ.
ಇನ್ನು ನಿಖಿಲ್‌ರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದರಿಂದ ಒಕ್ಕಲಿಗರ ಮಣೆ ಹಾಕಿದ ಆರೋಪಕ್ಕಿಂತ ಹೆಚ್ಚಾಗಿ ಕುಟುಂಬದವರಿಗೇ ಮನ್ನಣೆ ನೀಡಿದ ಆರೋಪ ಸಹಜವಾಗಿ ಬರಲಿದೆ. ಈ ಆರೋಪಗಳಿಂದ ದೂರಾಗಲು ಬಯಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಬೆಂಬಲವಾಗಿ 3 ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಲು ಚಿಂತನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ 3 ಹುದ್ದೆಗಳನ್ನು ಸೃಷ್ಟಿಸಿ, ಎಸ್‌ಸಿ ಅಥವಾ ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾಕರಿಗೆ ಸ್ಥಾನ ನೀಡುವ ಮೂಲಕ ಜಾತಿ ಸಮೀಕರಣದ ಲೆಕ್ಕಾಚಾರವನ್ನು ಸರಿದೂಗಿಸುವ ಪ್ರಯತ್ನಕ್ಕೆ ದಳ ಕೈಹಾಕಲಿದೆ.
ಅಲ್ಲದೇ ಸದ್ಯ ನಿಖಿಲ್ ಕುಮಾರಸ್ವಾಮಿಗೆ ಬಡ್ತಿ ಸಿಗೋದ್ರಿಂದ ತೆರವಾಗಲಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬಂದಿತ್ತು. ಇದೀಗ ಕೊನೆಯದಾಗಿ ಗುರುಮಿಟ್ಕಲ್ ಶಾಸಕ ಶರಣುಗೌಡ ಕಂದಕೂರು ಅವ್ರ ಹೆಸರು ಮುನ್ನಲೆಗೆ ಬಂದಿದೆ. ಈ ಹುದ್ದೆಗೇರಲು ಹಿಂದೇಟು ಹಾಕಿದ್ದ ಕಂದಕೂರು ಅವ್ರ ಮನವೊಲಿಸುವಲ್ಲಿ ಜೆಡಿಎಸ್ ಸಫಲವಾಗಿದ್ದು , ನಿಖಿಲ್ ಪಟ್ಟಾಭಿಷೇಕ ಜತೆಗೆ ಶರಣುಗೌಡ ಕಂದಕೂರು ಕೂಡ ಗಾದಿಯೇರಲಿದ್ದಾರೆ.