ದೇಶದಲ್ಲಿ ಹಲವು ಪ್ರಮುಖ ಬದಲಾವಣೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದ್ದು ಇದರಲ್ಲಿ ಒಂದು ದೇಶ ಒಂದು ಚುನಾವಣೆ ಮತ್ತು ವಕ್ಫ್ ಕಾಯ್ದೆ ತಿದ್ದುಪಡಿ ಸಾಕಷ್ಟು ಚರ್ಚೆಯಾದ ವಿಚಾರಗಳು. ರಾಷ್ಟ್ರಲ್ಲಿ ಏಕಕಾಲದಲ್ಲೇ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ನಡೆಸುವ ಉದ್ದೇಶಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಇನ್ನು ವಕ್ಫ್ ಕಾಯ್ದೆಯಲ್ಲಿನ ಪ್ರಮುಖ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಮಂಡನೆ ಮಾಡಲು ಉದ್ದೇಶಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದು, ಇದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಿದೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು, ಇತ್ಯರ್ಥವಾಗದ ಸಮಸ್ಯೆಗಳನ್ನು ಪರಿಹರಿಸಲು ತನ್ನ ಅಧಿಕಾರಾವಧಿಯನ್ನು ವಿಸ್ತರಿಸುವ ಅಗತ್ಯವನ್ನು ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುಯತ್ತದೆ ಎನ್ನಲಾಗಿತ್ತು. ಆದರೆ ಜೆಪಿಸಿ ಕಮಿಟಿ ಅಧಿಕಾರಾವಧಿ ವಿಸ್ತರಿಸಿದ್ದು, ಮುಂಬರುವ ಬೇಸಿಗೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.
ವಿರೋಧ ಪಕ್ಷಗಳು ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾವನೆಯನ್ನು ತೀವ್ರವಾಗಿ ಕಂಡಿಸಿದ್ದು, ಇದರ ಅಗತ್ಯತೆ ಪ್ರಶ್ನಿಸಿವೆ. ಸದ್ಯ ಪ್ರಸ್ತಾಪಿಸ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಕಳುಹಿಸಲಾಗಿದೆ. ಸಮಿತಿಯಲ್ಲಿ ವಿಸ್ತೃತ ಚರ್ಚೆಯಾಗಿ, ಅಗತ್ಯ ಮಾರ್ಪಾಡುಗಳ ಬಳಿಕ ಮತ್ತೊಂದು ಬಾರಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಂಡನೆ ಮಾಡಲಾಗುತ್ತದೆ. ಇನ್ನು 2025ರಲ್ಲೇ ಈ ಮಸೂದೆಯನ್ನು ಮಂಡನೆ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎನ್ನಲಾಗಿದ್ದು, ಆಗ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯ ಭವಿಷ್ಯ ಏನೆಂಬುದು ನಿರ್ಧಾರವಾಗಲಿದೆ