ಕೋವಿಡ್ ಬಿಕ್ಕಟ್ಟು ಕಳೆದು 5 ವರ್ಷದ ಬಳಿಕ ಚೀನಾದಲ್ಲಿ ಮತ್ತೆ ಹ್ಯೂಮನ್ ಮೆಟಾ ನ್ಯೂಮೋ ವೈರಸ್ ಕಾಣಿಸಿಕೊಂಡಿದೆ. ಸದ್ಯ ಈ ಎಚ್ ಎಂ ಪಿ ವಿ ವೈರಸ್ ಬಗ್ಗೆ ಭಾರತದಲ್ಲೂ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಿಗಾ ವಹಿಸಲಾಗಿದ್ದು, ಉಸಿರಾಟ ಸಂಬಂಧಿತ ಎಲ್ಲಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲಾಗ್ತಿದೆ ಅಂತ ಕೇಂದ್ರ ಗೃಹ ಆರೋಗ್ಯ ಸಚಿವಾಲಯ ಹೇಳಿದೆ.
ಅಂದಹಾಗೆ ಭಾರತದಲ್ಲಿ ಇನ್ನೂ ಈ ಎಚ್ ಎಂ ಪಿ ವಿ ಪ್ರಕರಣಗಳು ಕಂಡುಬಂದಿಲ್ಲ. ಅಲ್ಲದೇ ಚಳಿಗಾಲದಲ್ಲಿ ಉಂಟಾಗಿರುವ ಕಾಯಿಲೆಗಳ ಹೆಚ್ಚಳವೂ ಕೂಡ ಕಂಡು ಬಂದಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಅಂತ ಸಚಿವಾಲಯ ಮಾಹಿತಿ ನೀಡಿದೆ. ಅದ್ರೊಂದಿಗೆ ಮುಂಜಾಗ್ರತ ಕ್ರಮವಾಗಿ ಸರ್ಕಾರವು ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಜತೆಗೂ ಈ ವಿಚಾರ ಸಂಬಂಧಿಸಿದಂತೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಪರಿಶೀಲಿಸುತ್ತಿದೆ ಅಂತಲೂ ಹೇಳಿದೆ.
ಇನ್ನು ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ. ಅತುಲ್ ಗೋಯೆಲ್ ಮಾಹಿತಿ ನೀಡಿದೆ. ಚೀನಾದಲ್ಲಿ ಹರಡುತ್ತಿದೆ ಎನ್ನಲಾಗುತ್ತಿರುವ ಎಚ್ ಎಂ ಪಿವಿ ಬಗ್ಗೆ ಗಮನ ಹರಿಸಿದೆ. ಸದ್ಯಕ್ಕೆ ಭಯ ಪಡುವಂತಹ ಯಾವುದೇ ಪರಿಸ್ಥಿತಿ ಇಲ್ಲ ಅಂದಿದ್ದಾರೆ.
ಹಿರಿಯರಿಗೆ ಮತ್ತು ಕಿರಿಯರಿಗೆ ಅಂದ್ರೆ ವೃದ್ಧರಿಗೆ ಮತ್ತು ಮಕ್ಕಳಿಗೆ ಉಸಿರಾಟ ಸಂಬಂಧಿತ ಕಾಯಿಲೆ, ಜ್ವರಕ್ಕೆ ಕಾರಣವಾಗುವ ಇತರೆ ವೈರಾಣುಗಳಂತೆಯೇ ಎಚ್ ಎಂ ಪಿ ವಿ ಕೂಡ ಒಂದು ವೈರಾಣು ಅಷ್ಟೇ. ಅಲ್ಲದೇ ಚಳಿಗಾಲದಲ್ಲಿ ಇಂಥ ಕಾಯಿಲೆಗಳು ಸರ್ವೇ ಸಾಮಾನ್ಯ . ಹೀಗಾಗಿ ಇಂಥವುಗಳನ್ನ ನಿಭಾಯಿಸಲು ದೇಶದ ಆಸ್ಪತ್ರೆಗಳು ಸಿದ್ಧವಿದೆ, ಇವುಗಳಿಗೆ ವಿಶೇಷವಾದ ಪ್ರತ್ಯೇಕ ಔಷಧಗಳೇನು ಬೇಕಿಲ್ಲ. ಇದೂವರೆಗೂ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.
ಎಚ್ ಎಂ ಪಿ ವಿ ಕೇಸುಗಳು ಕಂಡು ಬಂದಿಲ್ಲವಾದ್ರೂ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸೋದು ಅಗತ್ಯ ಅಂತ ಗೋಯೆಲ್ ಹೇಳಿದ್ದಾರೆ. ಇದಕ್ಕಾಗಿ ಉಸಿರಾಟ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಾಮಾನ್ಯವಾಗಿ ಅನುಸರಿಸುವ ಕ್ರಮಗಳನ್ನೇ ಅನುಸರಿಸೋದು ಉತ್ತಮ ಅಂದಿದ್ದಾರೆ. ಇನ್ನು ಶೀತ,ಜ್ವರ ಇದ್ರೆ ಇತರರಿಂದ ಅಂತರ ಕಾಯ್ದುಕೊಳ್ಳಿ, ಆ ಕಾಯಿಲೆಗೆ ಸಂಬಂಧಿಸಿದ ಔಷಧಗಳನ್ನೇ ಸೇವಿಸೋದು ಉತ್ತಮ ಅನ್ನೋ ಸಲಹೆ ನೀಡಿದ್ದಾರೆ.