ದೆಹಲಿ ಸಿಎಂ ಹುದ್ದೆ ಮಹಿಳೆಯ ಪಾಲು
ರೇಖಾ ಗುಪ್ತಾ ಇನ್ಮುಂದೆ ದೆಹಲಿಯ ನೂತನ ಮುಖ್ಯಮಂತ್ರಿ
ಮಹಿಳಾ ಮತಗಳನ್ನ ಸೆಳೆದಿದ್ದ ಗುಪ್ತಾಗೆ ಬಿಜೆಪಿ ಬಂಪರ್
ಕೇಜ್ರಿವಾಲ್ ಸೋಲಿಸಿದ್ದ ಪರ್ವೇಶ್ ವರ್ಮಾ ಡಿಸಿಎಂ
ಗುರುವಾರ ಬೃಹತ್ ಪ್ರಮಾಣ ವಚನ ಸಮಾರಂಭ
ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರ ರಾಜ್ಯಧಾನಿ ದೆಹಲಿಗೆ ನೂತನ ಮುಖ್ಯಮಂತ್ರಿ ಆಯ್ಕೆಯ ಕಸರತ್ತಿಗೆ ಅಂತಿಮ ತೆರೆಬಿದ್ದಿದೆ. ದೆಹಲಿಯ ಶಾಲಿಮಾರ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ರೇಖಾ ಗುಪ್ತಾ ದೆಹಲಿಯ ನೂತನ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಜೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ನೂತನ ಶಾಸಕರ ಹೈ ವೋಲ್ಟೇಜ್ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ರೇಖಾ ಗುಪ್ತ ಆಯ್ಕೆಯಾಗಿದ್ದಾರೆ.
ದೆಹಲಿಯ ಶಾಲಿಮಾರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿರುವ ರೇಖಾ ಗುಪ್ತಾ ಹೆಸರು ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು. ಹರಿಯಾಣ ಮೂಲದವರಾಗಿರುವ ರೇಖಾ ಗುಪ್ತ ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ. ಇತ್ತೀಚಿಗೆ ನಡೆದಿದ್ದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದ ಬಂದಾನ್ ಕುಮಾರಿ ಅವರನ್ನು 29,595 ಮತಗಳ ಅಂತರದಿಂದ ಸೋಲಿಸಿದ್ದರು. ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ರೇಖಾ ಗುಪ್ತಾ ಅವರು ಆಪ್‌ಗೆ ಪ್ರಬಲ ಸ್ಪರ್ಧೆಯನ್ನ ಒಡ್ಡಿದ್ದರು. ದೆಹಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅನುಭವವು ಅವರಿಗೆ. ಬಿಜೆಪಿ ಹೈಕಮಾಂಡ್ ಹಿಂದೆ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸಿದ ನಿದರ್ಶನಗಳಿದ್ದವು. ಹೀಗಾಗಿ ಈ ಬಾರಿ ದೆಹಲಿಯಲ್ಲಿಯೂ ಹೊಸ ಮುಖಕ್ಕೆ ಮಣೆಹಾಕಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿತ್ತು. ಅಂತಿಮವಾಗಿ ರೇಖಾ ಗುಪ್ತ ಅವರಿಗೆ ದೆಹಲಿ ಗದ್ದುಗೆ ಒಲಿದು ಬಂದಿದೆ. ಈ ಮೂಲಕ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ನೇತೃತ್ವದ ವೀಕ್ಷಕರ ಸಭೆಯಲ್ಲಿ ದೆಹಲಿಗೆ ಬಿಜೆಪಿ ತನ್ನ ಎರಡನೇ ಮಹಿಳಾ ಮುಖ್ಯಮಂತ್ರಿಯನ್ನು ನೀಡಿದೆ.
ಅಲ್ಲದೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಸೋಲಿಸಿದ್ದ ಪರ್ವೇಶ್ ವರ್ಮಾ ದೆಹಲಿಯ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಸ್ಪೀಕರ್ ಆಗಿ ವಿಜೇಂದ್ರ ಗುಪ್ತಾ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್ನ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಕ್ಷದ ಅತಿಶಿ ದೆಹಲಿಯ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಗುರುವಾರ ಬೆಳಿಗ್ಗೆ 12.30 ನಿಮಿಷಕ್ಕೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಮೈತ್ರಿಕೂಟದ ಸಿಎಂಗಳು ಹಾಗೂ ಡಿಸಿಎಂಗಳು ಭಾಗಿಯಾಗಲಿದ್ದಾರೆ. ಹಾಗೇ, ಕೇಂದ್ರ ಸರ್ಕಾರದ ಸಂಪುಟದ ಸಚಿವರು ಕೂಡ ಭಾಗವಹಿಸಲಿದ್ದಾರೆ. ನೂತನ ಸಿಎಂ ಹಾಗೂ ಸಚಿವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಪ್ರಮಾಣವಚನ ಬೋಧಿಸಲಿದ್ದಾರೆ.