Wednesday, July 2, 2025

Latest Posts

ಅಮಾಯಕರನ್ನ ಕೊಂದವ್ರು ಬೆಲೆ ತೆರುವಂತೆ ಮಾಡಿದ್ದೇವೆ : ಆಪರೇಷನ್‌ ಸಿಂಧೂರ್‌ಗೆ ರಾಜನಾಥ್‌ ಸಿಂಗ್‌ ಶ್ಲಾಘನೆ

- Advertisement -

ಆ‌ಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಸೇನೆ ನಡೆಸಿರುವ ಆಪರೇಷನ್‌ ಸಿಂಧೂರ್‌ ಬಗ್ಗೆ ಮೊದಲ ಬಾರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಹತ್ವದ ಹೇಳಿಕೆ ನೀಡಿದ್ದಾರೆ. ನವದೆಹಲಿಯಲ್ಲಿಂದು ಆರು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಎಸ್‌ಎಫ್‌ನ 50 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ನಡೆಸಿ ಮಾತನಾಡಿರುವ ಅವರು ನಮ್ಮ ಅಮಾಯಕ ಜನರನ್ನು ಕೊಂದವರ ಮೇಲೆ ಮಾತ್ರ ನಾವು ದಾಳಿ ಮಾಡಿದ್ದೇವೆ ಎಂದು ಹೇಳುವ ಮೂಲಕ ದೇಶವು ಭಗವಾನ್ ಹನುಮಂತನ ಆದರ್ಶಗಳನ್ನು ಅಳವಡಿಸಿಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ಹನುಮಂತನ ಆದರ್ಶಗಳನ್ನು ಅನುಸರಿಸಿದ್ದೇವೆ..

ನಾವು ಹನುಮಂತನ ಆದರ್ಶಗಳನ್ನು ಅನುಸರಿಸಿದ್ದೇವೆ. ಅಶೋಕ ವನ ನಾಶದ ಸಮಯದಲ್ಲಿ ಅವರು ಹೇಳಿದಂತೆಯೇ, ನಮ್ಮ ಮೇಲೆ ದಾಳಿ ಮಾಡಿದವರ ಮೇಲೆ ಮಾತ್ರ ನಾವು ದಾಳಿ ಮಾಡಿದ್ದೇವೆ. ನಾವು ಕೂಡ ನಮ್ಮ ಮುಗ್ಧ ಜನರನ್ನು ಕೊಂದವರ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ಅಪರೇಷನ್‌ ಸಿಂಧೂರ್‌, ಇದು ದೃಢನಿಶ್ಚಯ ಮತ್ತು ಭಯೋತ್ಪಾದಕ ಹಾನಿಯೊಂದಿಗೆ ಅವರ ತರಬೇತಿ ಶಿಬಿರಗಳನ್ನು ಕೆಡವಿದ್ದಕ್ಕಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಇದು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ, ಜಾಗತಿಕವಾಗಿ ಕಂಟಕವಾಗಿರುವ ಭಯೋತ್ಪಾದಕ ಕೃತ್ಯಗಳಿಗೆ ಪ್ರತ್ತ್ಯುತ್ತರ ನೀಡುವ ಹಕ್ಕು ನಮ್ಮ ಭಾರತಕ್ಕಿದೆ ಎಂದು ಹೇಳಿದ್ದಾರೆ.

ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿ..

ನಮ್ಮ ಭಾರತೀಯ ಸೈನಿಕರು ಅಸಾಧಾರಣ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸುವ ಮೂಲಕ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದ್ದಾರೆ. ಭಾರತೀಯ ಸೇನೆಯು ಕಾರ್ಯಾಚರಣೆಯನ್ನು ನಿಖರತೆ, ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ ನಡೆಸಿದೆ. ನಾವು ನಿಗದಿಪಡಿಸಿದ ಉದ್ದೇಶಗಳನ್ನು ನಿಖರತೆಯೊಂದಿಗೆ ಮತ್ತು ಯೋಜಿತ ಸಮಯದೊಳಗೆ ಸಾಧಿಸಲಾಗಿದೆ. ಯಾವುದೇ ನಾಗರಿಕ ಹಾನಿ, ಅಥವಾ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ನಮ್ಮ ಪಡೆಗಳು ಹೆಚ್ಚಿನ ಸೂಕ್ಷ್ಮತೆಯನ್ನು ಕಾಪಾಡಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಅಧಿಕ ಸಂಯಮವನ್ನು ತೋರಿದೆ ಎಂಬ ಸರ್ಕಾರದ ನಿಲುವನ್ನು ರಾಜನಾಥ್‌ ಸಿಂಗ್ ಪುನರುಚ್ಚರಿಸಿದ್ದಾರೆ.

ಜಿನ್ ಮೋಹಿ ಮಾರಾ, ತಿನ್ ಮೋಹಿ ಮಾರೆ..!

‌ಇನ್ನೂ ರಾವಣನಿಂದ ಅಪಹರಿಸಿ ಬಂಧಿಸಲ್ಪಟ್ಟ ಸೀತೆಯನ್ನು ಹುಡುಕುತ್ತಿರುವಾಗ ಅಶೋಕ್ ವಾಟಿಕಾವನ್ನು ನಾಶಮಾಡುವ ಮೊದಲು ಹನುಮಂತ ಏನು ಹೇಳಿದ್ದರು ಎಂಬುದನ್ನು ತಿಳಿಸಲು ಅವರು ರಾಮಚರಿತಮಾನಸದಲ್ಲಿನ ಸನ್ನಿವೇಶವನ್ನು ಉಲ್ಲೇಖಿಸಿದ್ದಾರೆ. ಜಿನ್ ಮೋಹಿ ಮಾರಾ, ತಿನ್ ಮೋಹಿ ಮಾರೆ ಅಂದರೆ ನನ್ನ ಮೇಲೆ ದಾಳಿ ಮಾಡಿದವರನ್ನು ಮಾತ್ರ ನಾನು ಹೊಡೆದಿದ್ದೇನೆ, ನಾವು ಕೂಡ ನಮ್ಮ ಮುಗ್ಧ ಜನರಿಗೆ ಹಾನಿ ಮಾಡಿದವರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ನೆಲದ ಮೇಲಿನ ಈ ದಾಳಿಗೆ ಪ್ರತ್ಯುತ್ತರ ನೀಡುವ ಮೂಲಕ ಭಾರತ ತನ್ನ ಹಕ್ಕನ್ನು ಚಲಾಯಿಸಿದೆ. ಈ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ಯೋಚಿಸಿ ಮತ್ತು ಯೋಜಿತ ತಂತ್ರದೊಂದಿಗೆ ನಡೆಸಲಾಯಿತು. ಭಯೋತ್ಪಾದಕರ ನೈತಿಕ ಸ್ಥೈರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ, ಕಾರ್ಯಾಚರಣೆಯನ್ನು ಅವರ ಶಿಬಿರಗಳು ಮತ್ತು ಮೂಲಸೌಕರ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ನಮ್ಮ ಕೆಚ್ಚೆದೆಯ ಪಡೆಗಳಿಗೆ ನಾನು ನಮಸ್ಕರಿಸುತ್ತೇನೆ ಎನ್ನುವ ಮೂಲಕ ರಾಜನಾಥ್‌ ಸೇನೆಯ ಶೌರ್ಯ, ಪರಾಕ್ರಮವನ್ನು ಕೊಂಡಾಡಿದ್ದಾರೆ.

ಕ್ರೂರ ಹತ್ಯೆಗೆ ಆಪರೇಷನ್‌ ಸಿಂಧೂರ್..!

ಇನ್ನೂ ಆಪರೇಷನ್‌ ಸಿಂಧೂರ್‌ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಭಾರತೀಯ ಸೇನೆಯ ಪರಾಕ್ರಮವನ್ನು ಅಭಿನಂದಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಪಹಲ್ಗಾಮ್‌ನಲ್ಲಿ ನಮ್ಮ ಮುಗ್ಧ ಸಹೋದರರ ಕ್ರೂರ ಹತ್ಯೆಗೆ ಭಾರತ ನೀಡಿದ ಪ್ರತಿಕ್ರಿಯೆ ಆಪರೇಷನ್ ಸಿಂಧೂರ್. ಭಾರತ ಮತ್ತು ಅಲ್ಲಿನ ಜನರ ಮೇಲೆ ನಡೆಸಿದ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರ ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಅದರ ಮೂಲದಿಂದಲೇ ನಿರ್ಮೂಲನೆ ಮಾಡಲು ಭಾರತ ದೃಢವಾಗಿ ಬದ್ಧವಾಗಿದೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಆಪರೇಷನ್‌ ಸಿಂಧೂರ್‌ ಶ್ಲಾಘಿಸಿದ್ದಾರೆ.

ಭಯೋತ್ಪಾದನೆಗೆ ಜಗತ್ತು ಶೂನ್ಯ ಸಹಿಷ್ಣುತೆ ತೋರಿಸಬೇಕು..

‌ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟದಲ್ಲಿ ಬೆಂಬಲವಾಗಿ ನಿಲ್ಲುತ್ತಿರುವ ಎಲ್ಲ ರಾಷ್ಟ್ರಗಳಿಗೆ ಧನ್ಯವಾದಗಳನ್ನು ತಿಳಿಸಿರುವ ಕೇಂದ್ರ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಭಯೋತ್ಪಾದನೆಗೆ ಜಗತ್ತು ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕು ಎಂದು ಆಗ್ರಹಸಿದ್ದಾರೆ. ಅಲ್ಲದೆ ಅಮಾಯಕರ ಬಲಿ ಪಡೆದ ಭಯೋತ್ಪಾದಕರ ವಿರುದ್ಧ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ ಎಂದು ಆಪರೇಷನ್‌ ಸಿಂಧೂರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss