Friday, July 4, 2025

Latest Posts

ದೂರವಾಯ್ತಾ ದಶಕಗಳ ಮುನಿಸು..? : ಇಲ್ಲಿದೆ ನೋಡಿ ಸಿದ್ದರಾಮಯ್ಯ – ಬಿಕೆ ಹರಿಪ್ರಸಾದ್‌ ಭೇಟಿಯ ಇನ್‌ಸೈಡ್‌ ಕಹಾನಿ..!

- Advertisement -

ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯ ನಡುವೆಯೇ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಿಢೀರ್‌ ಆಗಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಇನ್ನೂ ಪ್ರಮುಖವಾಗಿ ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಬಗ್ಗೆಯೂ ಉಭಯ ನಾಯಕರು ಗಂಭೀರವಾಗಿ ಮಾತುಕತೆ ನಡೆಸಿದ್ದಾರೆ. ಉಪಹಾರದ ಜೊತೆಗೆಯೇ ಹರಿಪ್ರಸಾದ್‌ ಅವರೊಂದಿಗೆ ಹಲವು ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಹತ್ವದ ಸಮಾಲೋಚನೆ ನಡೆದಿದೆ.

ಬ್ರೇಕ್‌ ಫಾಸ್ಟ್‌ಗೆ ಬಂದಿದ್ದೇನೆ, ರಾಜಕೀಯ ಏನು ಇಲ್ಲ..

ತಮ್ಮ ಭೇಟಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹರಿಪ್ರಸಾದ್​ ಬ್ರೇಕ್​ ಫಾಸ್ಟ್​ಗೆ ಕರೆದಿದ್ದರು. ಬರುತ್ತೇನೆ ಎಂದಿದ್ದೆ, ಅದಕ್ಕೆ ಬಂದಿದ್ದೇನೆ. ರಾಜಕೀಯ, ಮಂಗಳೂರಿನ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜಕೀಯ ಚರ್ಚೆ ಎಂಬುದಾಗಿ ಏನು ನಡೆಸಿಲ್ಲ. ಜನರಲ್ ಆಗಿ ಚರ್ಚೆ ಮಾಡಿದ್ದೇವೆ. ಮಂಗಳೂರು ವಿಚಾರ ಚರ್ಚೆ ಯಾಗಿದೆ. ಅಲ್ಲಿಗೆ ಸೌಹಾರ್ದತೆ ಬರಬೇಕು. ಹಿಂದೂ, ಮುಸ್ಲಿಂ ನಡುವೆ ಯಾವುದೇ ದ್ವೇಷ ಇರಬಾರದು. ಸೌಹಾರ್ದತೆ ಬರಬೇಕು ಅಂತ ಚರ್ಚಿಸಿದ್ದೇವೆ. ಹರಿಪ್ರಸಾದ್ ಗೆ ಮಂಗಳೂರಿಗೆ ಹೋಗಿ ಬನ್ನಿ ಎಂದಿದ್ದೇನೆ.‌ ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬನ್ನಿ ಎಂದಿದ್ದೇನೆ ಎನ್ನುವ ಮೂಲಕ ಚರ್ಚೆಯ ಒಳಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜಕೀಯದ ಬಗ್ಗೆ ಯಾವುದೂ ಚರ್ಚೆಯಿಲ್ಲ. ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಸಚಿವ ಸ್ಥಾನ, ಸಭಾಪತಿ ಸ್ಥಾನದ ಬಗ್ಗೆ ಏನೂ ಚರ್ಚೆ ಆಗಿಲ್ಲ. ನೀವು ತಿಳಿದಂತೆ ಏನು ಮಾತನಾಡಿಲ್ಲ. ಬರೀ ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಭೇಟಿಯ ಹಿನ್ನೆಲೆಯನ್ನು ಬಹಿರಂಗಗೊಳಿಸಲಿಲ್ಲ.

ಸಂಚಲನಕ್ಕೆ ಕಾರಣವಾಯ್ತು ಉಭಯ ನಾಯಕರ ಭೇಟಿ..

ಬಹಳ ಮುಖ್ಯವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಸಂಪುಟ ಪುನರಚನೆ ಕೂಗು ಸಹ ಹೆಚ್ಚಾಗಿ ಕೇಳಿಬರುತ್ತಿದೆ‌. ಬಿ.ಕೆ. ಹರಿಪ್ರಸಾದ್ ಸಚಿವ ಸ್ಥಾನದ ಪ್ರಬಲವಾದ ಆಕಾಂಕ್ಷಿಯಾಗಿದ್ದಾರೆ. ಇದೀಗ ಬಿ.ಕೆ. ಹರಿಪ್ರಸಾದ್ ಭೇಟಿ ಮಹತ್ವ ಪಡೆದುಕೊಂಡಿದೆ.‌ ಇದರ ಜೊತೆಗೆ ಸಭಾಪತಿ ಸ್ಥಾನದ ಬಗ್ಗೆಯೂ ಹಲವು ಸುದ್ದಿಗಳು ಹರಿದಾಡುತ್ತಿದ್ದು, ಈ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ಭೇಟಿ ಹಲವು ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ.

ಅದರಲ್ಲೂ ದಿಢೀರ್ ಭೇಟಿ ಸುತ್ತ ಹಲವು ಚರ್ಚೆಗಳು ನಡೆದಿದ್ದು, ಸಿಎಂ ಏಕಾಏಕಿ ಭೇಟಿಯ ಹಿಂದಿರುವ ಉದ್ದೇಶದ ಬಗ್ಗೆ ಸದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಹರಿಪ್ರಸಾದ್, ಪದೇ ಪದೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನಿನ್ನೆಯಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.​ಸಿ. ವೇಣುಗೋಪಾಲ್ ಹಾಗೂ ರಣದೀಪ್​ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಮಹತ್ವದ ಜೊತೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಿ.ಕೆ.ಹರಿಪ್ರಾಸದ್ ಭೇಟಿಯು ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗುತ್ತಿದೆ.

ಒಂದೇ ಭೇಟಿಯಲ್ಲಿ ಮುನಿಸು ಶಮನ..

ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಯ ವೇಳೆ ಬಿ.ಕೆ.ಹರಿಪ್ರಸಾದ್ ತಮ್ಮ ಬೆಂಬಲ ನೀಡಿರಲಿಲ್ಲ ಎಂಬ ಕೋಪದ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ 2 ದಶಕಗಳಿಂದಲೂ ದೂರವಾಗಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದರೂ, ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಎಂ ಮೇಲೆ ಹರಿಪ್ರಸಾದ್‌ ಮುನಿಸಿಕೊಂಡಿದ್ದರು. ಅಲ್ಲದೆ ಮುನಿಸಿನ ಜೊತೆಗೆಯೇ ಸಿದ್ದರಾಮಯ್ಯ ಆವರಿಗೆ ಸೆಡ್ಡು ಹೊಡೆದು ಅವರು ಪ್ರತ್ಯೇಕ ಅಹಿಂದ ಸಮಾವೇಶ ನಡೆಸಿದ್ದರು. ಅಷ್ಟೇ ಅಲ್ಲದೆ ವೇದಿಕೆಯಲ್ಲಿ ಸಿಎಂ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದರು. ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದರು. ಹೀಗಾಗಿ ಮುಂಬರುವ ರಾಜಕೀಯ ಬೆಳವಣಿಗೆಗಳನ್ನು ಅರಿತು ಹಿರಯ ನಾಯಕನ ವಿಶ್ವಾಸಕ್ಕೆ ಪಡೆಯಲು ಸಿಎಂ ಮುಂದಾಗಿದ್ದಾರೆ.

ಇನ್ನೂ ಜಾತಿ ಗಣತಿ ವಿಚಾರವಾಗಿ ಸರ್ಕಾರ ಬಿದ್ದರೂ ಪರವಾಗಿಲ್ಲ, ಆಗಿರೋ ಅನ್ಯಾಯವನ್ನು ಸರಿಪಡಿಸಿ ಎನ್ನುವ ಹಂತದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಈ ರೀತಿಯಾಗಿ ಅವರ ಬಹಿರಂಗ ಹೇಳಿಕೆಗಳು ಜಾಸ್ತಿ ಆಗುತ್ತಿದ್ದಂತೆ ಹೈಕಮಾಂಡ್‌ ಎಚ್ಚೆತ್ತುಕೊಂಡಿತ್ತು ಯಾವುದೇ ತೆರನಾದ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿತ್ತು. ಅಲ್ಲದೆ ಪ್ರತ್ಯೇಕ ಸಿಎಂ ಹೇಳಿಕೆ, ಪವರ್ ಶೇರಿಂಗ್ ವಿಚಾರದಲ್ಲಿ ಮಾತನಾಡದಂತೆ ಖಡಕ್‌ ಎಚ್ಚರಿಕೆಯನ್ನೂ ನೀಡಿತ್ತು.

ಸಿದ್ದರಾಮಯ್ಯ ದೂರದೃಷ್ಟಿಯ ರಾಜಕಾರಣಿ..

ಈ ಉಭಯ ನಾಯಕರ ಭೇಟಿಯ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯು ನಡೆದಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಪ್ರಮುಖವಾಗಿ ಹರಿಪ್ರಸಾದ್‌ ದೆಹಲಿ ಮಟ್ಟದಲ್ಲಿ ಮೊದಲಿನಿಂದಲೂ ತಮ್ಮದೇ ಆದ ಸಂಪರ್ಕವನ್ನು ಹೊಂದಿರುವ ನಾಯಕರಾಗಿದ್ದಾರೆ. ಈ ಬಾರಿ ಅವರಿಗೆ ರಾಜ್ಯ ಸರ್ಕಾರದ ಸಂಪುಟದಲ್ಲಿ ಸ್ಥಾನ ದೊರೆಯುವ ಲಕ್ಷಣಗಳನ್ನು ಈ ಭೇಟಿಯು ತೋರಿಸಿಕೊಡುತ್ತಿದೆ ಎಂಬಂತೆಯೂ ವ್ಯಾಖ್ಯಾನಿಸಲಾಗುತ್ತಿದೆ. ಸಿದ್ದರಾಮಯ್ಯ ದೂರದೃಷ್ಟಿಯ ಜೊತೆಗೆ ತಮ್ಮದೇ ಆದ ರಾಜಕೀಯದ ದಾಳ ಹಾಗೂ ಸಮೀಕರಣದೊಂದಿಗೆ ರಾಜಕೀಯದಲ್ಲಿ ಛಾಪು ಮೂಡಿಸಿರುವ ಹಿರಿಯ ನಾಯಕ, ಹೀಗಾಗಿ ಈ ಬಾರಿ ಹರಿಪ್ರಸಾದ್‌ ಭೇಟಿಯ ಹಿಂದೆ ಇರೋ ಅಡಗಿರೋ ಅಸಲಿಯತ್ತೇನು ಎನ್ನುವುದಕ್ಕೆ ಶೀಘ್ರವೇ ಉತ್ತರ ಸಿಗಲಿದೆ.

- Advertisement -

Latest Posts

Don't Miss