Friday, July 4, 2025

Latest Posts

ಇದ್ಯಾವ ಸೀಮೆ ನ್ಯಾಯ! K.N ರಾಜಣ್ಣಗೆ ನೋಟಿಸ್ ಯಾಕಿಲ್ಲ?

- Advertisement -

ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಅಸಮಾಧಾನವನ್ನು ತಣಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಆಯ್ದ ಕೆಲ ಶಾಸಕರನ್ನು ಕರೆಸಿ ಅವರ ಅಸಮಾಧಾನ ಆಲಿಸಿದ್ದಾರೆ. ಈ ನಡುವೆಯೇ ನಾಯಕತ್ವ ಬದಲಾವಣೆಯ ಹೇಳಿಕೆ ನೀಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದು ಕೂಡ ಕೈ ಪಾಳಯದಲ್ಲಿ ಇನ್ನಷ್ಟು ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ.

ಪಕ್ಷದಲ್ಲಿನ ನಾಯಕತ್ವ ಬದಲಾವಣೆಯ ಬಗ್ಗೆ ದಿನಕ್ಕೊಂದರಂತೆ ಹೇಳಿಕೆಗಳನ್ನು ನೀಡುತ್ತಿರುವ ಹಿರಿಯರಿಗೆ ನೋಟಿಸ್ ನೀಡದೆ, ಕೇವಲ ಇಕ್ಬಾಲ್ ಹುಸೇನ್ ಅವರಿಗಷ್ಟೇ ಯಾಕೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಬೇಸರ ಹೊರಹಾಕಿರುವ ಕುಣಿಗಲ್ ಶಾಸಕ ಡಾ. ರಂಗನಾಥ್ ಪಕ್ಷದಲ್ಲಿನ ಇಬ್ಬಗೆಯ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಇಕ್ಬಾಲ್ ಹುಸೇನ್​ಗೆ ನೋಟಿಸ್ ನೀಡಿದ್ದಾರೆ. ಹಿರಿಯರಿಗೂ ಅದೇ ಮಾನದಂಡ ಇರಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ. ಪಕ್ಷಕ್ಕಾಗಿ ಹಲವರು ಬಲಿದಾನವನ್ನು ಮಾಡಿದ್ದಾರೆ. ಹಗುರವಾದ ಹೇಳಿಕೆ ಕೊಟ್ಟು ಅವಮಾನಿಸಬೇಡಿ ಎಂದು ಪರೋಕ್ಷವಾಗಿ ರಾಜಣ್ಣ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಕ್ಬಾಲ್ ಹುಸೇನ್ ಅವರು ಪಕ್ಷದಲ್ಲಿ ಬದಲಾವಣೆಯ ಆಸೆಯಿಂದ ಹಾಗೆ ಹೇಳಿರಬಹುದೇನೋ, ಅದು ಪಕ್ಷದ ಚೌಕಟ್ಟಿನೊಳಗೆ ಹೇಳುವ ವಿಚಾರ. ಆದರೆ ಶಾಸಕರಿಗೆ ನೀಡಿರುವ ನೋಟಿಸ್​ನ ಮಾನದಂಡ ಹಿರಿಯರಿಗೂ ಇರಬೇಕಲ್ಲವೆ ಎಂದು ಬೇಸರ ಹೊರಹಾಕಿದ್ದಾರೆ.

ಪಕ್ಷದಲ್ಲಿ ಯಾರೇನೇ ಮಾತನಾಡಿದರೂ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ನಮ್ಮ ಅಧ್ಯಕ್ಷರು ಅದನೆಲ್ಲ ಹ್ಯಾಂಡಲ್ ಮಾಡೋಕೆ ಸಮರ್ಥರಾಗಿದ್ದಾರೆ. ನಮ್ಮ ಜಿಲ್ಲೆಯ ವಿಚಾರದಲ್ಲಿ ನನಗೂ ಅಸಮಾಧಾನವಿದೆ, ಆದರೆ ಅದು ಪಕ್ಷದ ಚೌಕಟ್ಟು, ಶಿಸ್ತು ಹಾಗೂ ಬದ್ದತೆಯಲ್ಲಿ ನಡೆಯಬೇಕು. ನಮ್ಮ ಅಧ್ಯಕ್ಷರು ಖಡಾ ಖಂಡಿತವಾಗಿ ಒಂದೇ ಮಾನದಂಡ ಬಳಸಿ ಇನ್ನು ಮುಂದೇ ಈ ರೀತಿಯಾಗಿ ಮಾತನಾಡಬಾರದು ಎಂದು ನೋಟಿಸ್ ನೀಡಿದ್ದಾರೆ.

ಆದರೆ ಇಕ್ಬಾಲ್ ಹುಸೇನ್ ಒಳ್ಳೆಯ ಉದ್ದೇಶದಲ್ಲಿ, ಭಾವನಾತ್ಮಕವಾಗಿ ಹೇಳಿರಬಹುದು. ಅವು ಬಹಳಷ್ಟು ಶಾಸಕರ ಮನದಾಳದ ಮಾತುಗಳಾಗಿರಲೂಬಹುದು ಅಂತ ಅನ್ಸುತ್ತೆ. ತಮಗೆ ಬಂದಿರುವ ನೋಟಿಸ್​ಗೆ ಇಕ್ಬಾಲ್ ಹುಸೇನ್ ಸೂಕ್ತ ಉತ್ತರ ನೀಡುತ್ತಾರೆ. ಇನ್ನು ಮುಂದೆ ಈ ರೀತಿಯ ನಾಯಕತ್ವದ ಬದಲಾವಣೆಯ ಹೇಳಿಕೆಗಳನ್ನು ನೀಡಬಾರದು ಎನ್ನುವುದಕ್ಕೆ ನಾನು ಧ್ವನಿಗೂಡಿಸುವೆ. ಈಗ ರಾಜ್ಯಕ್ಕೆ ಸುರ್ಜೇವಾಲಾ ಅವರು ಬಂದಿದ್ದಾರೆ. ಇದರಿಂದ ಪಕ್ಷದಲ್ಲಿ ಯಾವುದೇ ಹೇಳಿಕೆಗಳು ಕೇಳಿ ಬರುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ರಂಗನಾಥ್ ತಿಳಿಸಿದ್ದಾರೆ.

- Advertisement -

Latest Posts

Don't Miss