ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಹವರ್ ನಲ್ಲಿ ತುರ್ತು ಚಿಕಿತ್ಸೆ ಸಿಕ್ಕಿದರೆ ಬದುಕುಳಿಯುತ್ತಾರೆ. ತುರ್ತು ಚಿಕಿತ್ಸೆ ನೀಡುವ ಸ್ಟೆಮಿ ವ್ಯವಸ್ಥೆ, ಹಾಸನ ಜಿಲ್ಲೆಯ 3 ತಾಲೂಕು ಆಸ್ಪತ್ರೆಗಳಲ್ಲಿವೆ. ಈ 3 ಆಸ್ಪತ್ರೆಗಳಲ್ಲಿ ಕಳೆದ 2 ವರ್ಷದಲ್ಲಿ 37,774 ರೋಗಿಗಳಿಗೆ ಚಿಕಿತ್ಸೆ ಲಭಿಸಿದೆ. ಶೇಕಡ 87ರಷ್ಟು ಜನರು ಹೃದಯಾಘಾತ ಸಾವಿನಿಂದ ಬಚಾವಾಗಿದ್ದಾರೆ.
ಸ್ಟೆಮಿ ವ್ಯವಸ್ಥೆ ಎಂದರೇನು..?
ಹೃದಯಾಘಾತಕ್ಕೆ ಒಳಗಾದ ಜನರನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಾಗ, ಮೊದಲು ಇಸಿಜಿ ಮಾಡಲಾಗುತ್ತದೆ. ಇದೇ ವೇಳೆ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ ತಕ್ಷಣವೇ ಸಂದೇಶ ರವಾನಿಸಲಾಗುತ್ತದೆ. ಅಲ್ಲಿನ ತಜ್ಞ ವೈದ್ಯರು ರೋಗಿಗೆ ಯಾವ ರೀತಿಯ ತುರ್ತು ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ತಜ್ಞರ ಸಲಹೆಯಂತೆ ತಾಲೂಕು ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಅಗತ್ಯಬಿದ್ರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
ಇದೇ ಸ್ಟೆಮಿ ವ್ಯವಸ್ಥೆ. ಹಾಸನದ ಹಿಮ್ಸ್ ಆಸ್ಪತ್ರೆ, ಹೊಳೆನರಸೀಪುರದ ತಾಲೂಕು ಆಸ್ಪತ್ರೆ, ಚನ್ನರಾಯಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸ್ಟೆಮಿ ವ್ಯವಸ್ಥೆ ಇದೆ. ಇದುವರೆಗೆ ಕಳೆದ 2 ವರ್ಷಗಳಲ್ಲಿ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ 15,474 ಮಂದಿಗೆ, ಹೊಳೆನರಸೀಪುರ ಆಸ್ಪತ್ರೆಯಲ್ಲಿ 15,200 ಮಂದಿಗೆ, ಹಿಮ್ಸ್ ಆಸ್ಪತ್ರೆಯಲ್ಲಿ 7,100 ಮಂದಿಗೆ ಸ್ಟೆಮಿ ವ್ಯವಸ್ಥೆ ಮೂಲಕ ಚಿಕಿತ್ಸೆ ನೀಡಲಾಗಿದೆ.
2ನೇ ಹಂತದಲ್ಲಿ ಹಾಸನ ಜಿಲ್ಲೆಯ ಯಾವ ತಾಲೂಕಿಗೂ ಸ್ಟೆಮಿ ವ್ಯವಸ್ಥೆ ಮಂಜೂರಾಗಿಲ್ಲ. 3ನೇ ಹಂತದಲ್ಲಾದರೂ ಉಳಿದ 5 ತಾಲೂಕು ಆಸ್ಪತ್ರೆಗಳಿಗೆ ಸ್ಟೆಮಿ ವ್ಯವಸ್ಥೆ ಮಾಂಜೂರು ಮಾಡಿ ಅಂತಾ 2 ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮನವಿ ಮಾಡಿದ್ದಾರೆ.