Saturday, July 12, 2025

Latest Posts

ಮತ್ತೆ ರಾಜ್ಯಕ್ಕೆ ಸುರ್ಜೇವಾಲಾ ಎಂಟ್ರಿ : ಮಂತ್ರಿಗಳ ಕಿವಿ ಹಿಂಡ್ತಾರಾ ಉಸ್ತುವಾರಿ?

- Advertisement -

ಬೆಂಗಳೂರು : ಕಳೆದ ವಾರವಷ್ಟೇ ರಾಜ್ಯದಲ್ಲಿನ ಕೆಲ ಕಾಂಗ್ರೆಸ್‌ ಪಕ್ಷದ ಶಾಸಕರ ಅಸಮಾಧಾನ ತಿಳಿಗೊಳಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮತ್ತೆ ನಾಳೆಯಿಂದ ಇನ್ನುಳಿದ ಶಾಸಕರ ಅಹವಾಲು, ದೂರುಗಳನ್ನು ಆಲಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ.

ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ, ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ ವಸತಿ ಇಲಾಖೆಯಲ್ಲಿ ಆಶ್ರಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬಿತ್ಯಾದಿ ಆರೋಪಗಳ ಕುರಿತು ಖುದ್ದು ಸುರ್ಜೇವಾಲಾ ಶಾಸಕರಾದ ಬಿ.ಆರ್‌. ಪಾಟೀಲ್‌, ರಾಜು ಕಾಗೆ ಸೇರಿದಂತೆ ಹಲವರಿಂದ ಮಾಹಿತಿ ಪಡೆದು ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದರು.

ಇನ್ನೂ ಇದರ ಮುಂದುವರೆದ ಭಾಗವಾಗಿ ನಾಳೆ ಮತ್ತೆ ಶಾಸಕರ ಸಂಕಷ್ಟಗಳನ್ನು ಆಲಿಸಲಿದ್ದಾರೆ. ಪ್ರಮುಖವಾಗಿ ಸಂಪುಟ ಪುನಾರಚನೆಯ ಚರ್ಚೆಗಳು ನಡೆಯುತ್ತಿರುವಾಗಲೇ ಉಸ್ತುವಾರಿಯ ಎಂಟ್ರಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಲಿದೆ. ನಾಳೆಯಿಂದ ಕಾಂಗ್ರೆಸ್‌ ಶಾಸಕರ ಜೊತೆಗೆ ಒನ್‌ ಟೂ ಒನ್‌ ಮ್ಯಾರಥಾನ್‌ ಸಭೆಗಳನ್ನು ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಅಸಮಾಧಾನ ಹಾಗೂ ಕ್ಷೇತ್ರಗಳ ಅಭಿವೃದ್ದಿಯ ಅನುದಾನದ ಕುರಿತು ಸುರ್ಜೇವಾಲಾ ಸಂಪೂರ್ಣ ವಿವರಗಳನ್ನು ಪಡೆಯಲಿದ್ದಾರೆ.

ಪ್ರಮುಖವಾಗಿ ಸಚಿವರ ವಿರುದ್ಧ ಮುನಿಸಿಕೊಂಡಿರುವ ಶಾಸಕರು ಉಸ್ತುವಾರಿಗಳ ಮುಂದೆ ಅವರ ಕಾರ್ಯವೈಖರಿಯ ಬಗ್ಗೆ ನೀಡುವ ಮಾಹಿತಿಯೇ ಮಂತ್ರಿ ಪಟ್ಟದ ಉಳಿವಿಗೆ ಕಾರಣವಾಗಲಿದೆ. ತಮ್ಮ ಮನವಿಗೆ ಸಚಿವರು ಯಾವ ರೀತಿ ಸ್ಪಂದಿಸಿದ್ದಾರೆ? ಹೇಗೆಲ್ಲ ಅನುದಾನದ ಹಂಚಿಕೆ ಮಾಡಿದ್ದಾರೆ ಎಂಬೆಲ್ಲ ವಿಚಾರಗಳ ಕುರಿತು ಸುರ್ಜೇವಾಲಾ ವಿಸ್ತ್ರತವಾಗಿ ಮಾತುಕತೆ ನಡೆಸಲಿದ್ದಾರೆ.

ಸರ್ಕಾರದ ಇಲಾಖೆಗಳಲ್ಲಿ ಶಾಸಕರಿಗೆ ಯಾವೆಲ್ಲ ಕೆಲಸಗಳಾಗಿವೆ. ಇನ್ನುಳಿದಂತೆ ಆಗಬೇಕಾಗಿರುವ ಕಾರ್ಯಗಳು ಯಾವವು? ಎನ್ನುವುದರ ಬಗ್ಗೆಯೂ ಒನ್‌ ಟೂ ಒನ್‌ ಮೀಟಿಂಗ್‌ನಲ್ಲಿ ಚರ್ಚೆಯಾಗಲಿದೆ. ಸಚಿವ ಸಂಪುಟ ಪುನಾರಚನೆಗೂ ಮುನ್ನ ಸದ್ಯ ಸಂಪುಟದಲ್ಲಿರುವ ಸಚಿವರ ರಿಪೋರ್ಟ್‌ ಕಾರ್ಡ್‌ನ ಮೇಲೆ ಅವರ ಮಂತ್ರಿಗಿರಿಯ ಭವಿಷ್ಯ ನಿಂತಿದೆ. ತಮ್ಮ ಅವಧಿಯಲ್ಲಿ ಯಾವೆಲ್ಲ ಸಾಧನೆಗಳಿಗೆ ಯಾವ್ಯಾವ ಇಲಾಖೆಗಳ ಮಂತ್ರಿಗಳು ಕಾರಣವಾಗಿದ್ದಾರೆ.

ತಮ್ಮ ಕಾರ್ಯದಿಂದ ಸರ್ಕಾರಕ್ಕೆ ಹೇಗೆ ಒಳ್ಳೆಯ ಹೆಸರನ್ನು ತರಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಸಚಿವರು ಶಾಸಕರ ಜೊತೆಗಿನ ಸಂಪರ್ಕ, ಕ್ಷೇತ್ರದ ಅಭಿವೃದ್ದಿಗಳಿಗೆ ಸಹಕಾರದ ಬಗ್ಗೆಯೂ ಸುರ್ಜೇವಾಲಾ ತಿಳಿದುಕೊಳ್ಳಲಿದ್ದಾರೆ. ಈಗಾಗಲೇ ನಾಯಕತ್ವದ ಫೈಟ್‌ಗೆ ಮದ್ದು ಅರಿದಿರುವ ಉಸ್ತುವಾರಿ ಸುರ್ಜೇವಾಲಾ ಈ ಬಾರಿಯೂ ಶಾಸಕರ ದೂರನ್ನು ಆಧರಿಸಿ ಸಂಬಂಧಟ್ಟ ಮಂತ್ರಿಗಳ ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೂ ಸಂಪುಟ ಪುನಾರಚನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸಂಪುಟ ಪುನಾರಚನೆಗೆ ಹೆಚ್ಚಿನ ಒಲವು ತೋರಿದ್ದಾರೆ. ಹೀಗಾಗಿ ಅದರ ಮೊದಲ ಭಾಗವಾಗಿಯೇ ಹೈಕಮಾಂಡ್‌ ಹಾಲಿ ಸಿದ್ದು ಸರ್ಕಾರದ‌ ಸಚಿವರ ರಿಪೋರ್ಟ್‌ ಕಾರ್ಡ್ ಪಡೆಯಲು ಮುಂದಾಗಿದ್ದು, ಅದರ ಆಧಾರದಲ್ಲಿ ಯಾರು ಔಟ್‌? ಇನ್ಯಾರು ಇನ್‌ ಎಂಬುವುದು ನಿರ್ಧಾರವಾಗಲಿದೆ.

- Advertisement -

Latest Posts

Don't Miss