ಬೆಂಗಳೂರು : ಕಾಂಗ್ರೆಸ್ ಪಕ್ಷದ ಒಬಿಸಿ ಸಲಹಾ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕುರಿತು ಹಲವು ಊಹಾಪೋಹಗಳು ಸೃಷ್ಟಿಯಾಗಿದ್ದವು. ರಾಜ್ಯಾದ್ಯಂತ ಇದೇ ವಿಚಾರ ಬೆಳಿಗ್ಗೆಯಿಂದಲೂ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಇದಕ್ಕೆಲ್ಲ ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದು, ಯಾವುದೇ ರೀತಿಯ ನೇಮಕವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ತಿಳಿಸಿರುವ ಅವರು, ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸದಸ್ಯರಾಗಿ ನನ್ನನ್ನು ನೇಮಕ ಮಾಡಲಾಗಿದೆ. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿ ಮಂಡಳಿಯ ಅಧ್ಯಕ್ಷರಾಗಿ ನನ್ನ ನೇಮಕ ಮಾಡಲಾಗಿದೆ ಎಂದು ವರದಿ ಮಾಡಿವೆ. ಇದು ತಪ್ಪು ಮಾಹಿತಿಯಾಗಿದೆ ಎಂದು ಹೇಳಿದ್ದಾರೆ.
ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಭಾಗವಹಿಸುವ ಈ ಸಭೆಯ ಆತಿಥ್ಯವನ್ನು ನಾನು ವಹಿಸಿಕೊಂಡಿದ್ದೇನೆ ಎಂದು ಹೇಳುವ ಮೂಲಕ ತಮ್ಮ ನೇಮಕದ ಕುರಿತು ಹರಿದಾಡುತ್ತಿದ್ದ ಸುದ್ದಿಗಳಿಗೆ ಫುಲ್ ಸ್ಟಾಪ್ ನೀಡಿದ್ದಾರೆ.
ಇನ್ನೂ ಈ ಸುದ್ದಿಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವಣೆಗಳಾಗುತ್ತವೆ, ನಾಯಕತ್ವ ವಿಚಾರದ ಕುರಿತು ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂಬೆಲ್ಲ ಚರ್ಚೆಗಳು ಮುಂದುವರೆದಿದ್ದವು. ಆದರೆ ಇವುಗಳಿಗೆಲ್ಲ ಪೂರ್ಣ ವಿರಾಮ ನೀಡಿರುವ ಸಿದ್ದರಾಮಯ್ಯ ತಮ್ಮ ನೇಮಕವಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಎದ್ದಿದ್ದ ಗೊಂದಲಗಳನ್ನು ನಿವಾರಿಸುವ ಕೆಲಸ ಮಾಡಿದ್ದಾರೆ.