Friday, July 11, 2025

Latest Posts

ಕೈನಲ್ಲಿ ದಿಡೀರ್ ಬೆಳವಣಿಗೆ ಸಿಎಂ, ಡಿಸಿಎಂಗೆ ಹೈಕಮಾಂಡ್ ಬುಲಾವ್? : ಬದಲಾಗುತ್ತಾ ನಾಯಕತ್ವ?

- Advertisement -

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ತಾತ್ಕಾಲಿಕವಾಗಿ ಸ್ವಲ್ಪ ತಣ್ಣಗಾಗಿದ್ದರೂ ಕೂಡ ಮುಂದಿನ ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಮೊದಲ ಹಂತದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಮಾಹಿತಿ ಸಂಗ್ರಹಿಸಿದೆ. ಕಳೆದ ವಾರವಷ್ಟೇ ರಾಜ್ಯ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಶಾಸಕರ ಅಸಮಾಧಾನ, ಸಚಿವರ ಕಾರ್ಯವೈಖರಿ ಹಾಗೂ ನಾಯಕತ್ವದ ಬಗ್ಗೆ ಇರುವ ಅಭಿಪ್ರಾಯಗಳನ್ನು ಪಡೆದಿದ್ದಾರೆ. ಈ ಕುರಿತು ಕೆಲ ಕಾಂಗ್ರೆಸ್ ಶಾಸಕರ ಜೊತೆ ಒನ್​ ಟೂ ಒನ್ ಮೀಟಿಂಗ್​ ಮಾಡುವ ಮೂಲಕ ಗೊಂದಲಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನೂ ಎರಡನೇ ಹಂತದಲ್ಲೂ ಇನ್ನುಳಿದ ಶಾಸಕರ ಅಹವಾಲುಗಳನ್ನು ಆಲಿಸಲು ಇಂದು ಮತ್ತೆ ಸುರ್ಜೇವಾಲಾ ರಾಜ್ಯಕ್ಕೆ ಎಂಟ್ರಿ ನೀಡಲಿದ್ದಾರೆ. ಈ ನಡುವೆಯೇ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದಿಲ್ಲಿಗೆ ಹಾರಲಿದ್ದಾರೆ.

ಮುಖ್ಯವಾಗಿ ಮಂಗಳವಾರ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಅಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ ಕುತೂಹಲವೆಂಬಂತೆಯೇ ಡಿಸಿಎಂ ಬಳಿಕ ಬುಧವಾರ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆಯೇ ಇಬ್ಬರೂ ನಾಯಕರ ದಿಢೀರ್ ದೆಹಲಿ ಪಯಣ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ಸಿಎಂ ಹಾಗೂ ಡಿಸಿಎಂ ಅವರು ಬಹುತೇಕ ತಮ್ಮ ಇಡೀ ದೆಹಲಿಯ ಪ್ರವಾಸದಲ್ಲಿ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಡಿಕೆ ಶಿವಕುಮಾರ್ ಅವರೂ ಕೂಡ ಕೈ ನಾಯಕರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಕೈ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸುವ ಲಕ್ಷಣಗಳು ದಟ್ಟವಾಗಿವೆ.

ಇನ್ನೊಂದೆಡೆ ಗಮನಿಸಿದಾಗ ಹಲವು ದಿನಗಳಿಂದ ಬಾಕಿ ಇರುವ ವಿಧಾನಪರಿಷತ್ ಸದಸ್ಯರ ನೇಮಕಾತಿ, ಸಂಪುಟ ಪುನಾರಚನೆಯಂತಹ ಕೆಲಸಗಳು ನಡೆಯಬೇಕಿದ್ದು, ಈ ಕುರಿತೂ ಸಹ ನಿರ್ಧಾರವಾಗಬೇಕಿದೆ. ಈ ನಿಟ್ಟಿನಲ್ಲಿಯೂ ಈ ನಾಯಕರ ದೆಹಲಿ ಭೇಟಿಯು ಮಹತ್ವ ಪಡೆದಿದೆ.

ಮೇಲ್ನೋಟಕ್ಕೆ ಕೇಂದ್ರ ಸಚಿವರ ಭೇಟಿ ಎಂದು ಹೇಳಲಾಗುತ್ತಿದ್ದರೂ, ಈಗಾಗಲೇ ಒಂದು ಹಂತಕ್ಕೆ ಸುರ್ಜೇವಾಲಾರಿಂದ ರಾಜ್ಯ ಕಾಂಗ್ರೆಸ್​​ನಲ್ಲಿನ ಚಟುವಟಿಕೆಗಳ ಬಗ್ಗೆ ಹೈಕಮಾಂಡ್ ವಿವರ ಸಂಗ್ರಹಿಸಿದೆ. ಅದರ ಮುಂದುವರೆದ ಭಾಗವಾಗಿ ಶಾಸಕರ ದೂರಿನ ಆಧಾರದ ಮೇಲೆ, ಸಚಿವರ ಕಾರ್ಯವೈಖರಿ ನೋಡಿ ರಾಜ್ಯದಲ್ಲಿ ಮಹತ್ವದ ಬದಲಾವಣೆಯ ಬಗ್ಗೆ ಚಿಂತನೆ ನಡೆಸಲಿದೆಯಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ಈ ಹಿನ್ನೆಲೆಯಲ್ಲಿಯೇ ಇಬ್ಬರೂ ನಾಯಕರಿಗೆ ಬುಲಾವ್ ನೀಡಿದೆಯಾ ಎಂಬ ಚರ್ಚೆಗಳು ಶುರುವಾಗಿವೆ.

ಇನ್ನೂ ಒಂದು ವೇಳೆ ಇಬ್ಬರೂ ನಾಯಕರು ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸಿದರೆ, ಸಚಿವ ಕೆ.ಎನ್. ರಾಜಣ್ಣ ಹೇಳಿರುವ ಸೆಪ್ಟೆಂಬರ್ ಕ್ರಾಂತಿಯ ಮಾತಿಗೆ ಇನ್ನಷ್ಟು ಮಾನ್ಯತೆ ಬಂದಂತಾಗುತ್ತದೆ. ಹೀಗಾಗಿ ಎಲ್ಲರ ಚಿತ್ತ ಸಿಎಂ ಹಾಗೂ ಡಿಸಿಎಂ ಇಬ್ಬರ ದೆಹಲಿಯ ಭೇಟಿಯತ್ತ ನೆಟ್ಟಿದೆ.

- Advertisement -

Latest Posts

Don't Miss