ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಬೆಳ್ಳಂಬೆಳಗ್ಗೆ ಇಡಿ ಶಾಕ್ ಕೊಟ್ಟಿದೆ. ಬೆಂಗಳೂರಿನ ಮಾರತ್ ಹಳ್ಳಿಯ ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದು ಪರಿಶೀಲನೆ ನಡೆಸಲಾಗ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದಾರೆ.
ಶಾಸಕ ಸುಬ್ಬಾರೆಡ್ಡಿ ವಿರುದ್ಧ, ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಹೀಗಾಗಿ ವಿದೇಶಿ ವಿನಿಮಯ ಕಾಯ್ದೆ 1999ರ ಸೆಕ್ಷನ್ 37ರ ಅಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದ್ಯಮಿಯಾಗಿರುವ ಶಾಸಕ ಸುಬ್ಬಾರೆಡ್ಡಿ ಮತ್ತು ಕುಟುಂಬ ಸದಸ್ಯರ ಹೆಸರಲ್ಲಿ ವಿದೇಶಗಳಲ್ಲೂ ಹೂಡಿಕೆ ಮಾಡಲಾಗಿದೆ. ಹಲವು ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿದ್ದು, ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ.
ವಿದೇಶಿ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಸುಬ್ಬಾರೆಡ್ಡಿ, ವಿದೇಶಗಳಲ್ಲಿ ಹಲವು ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಮಲೇಷ್ಯಾ, ಹಾಂಕಾಂಗ್, ಜರ್ಮನಿಯಲ್ಲೂ ಆಸ್ತಿ ಹೊಂದಿದ್ದು, ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ಸರ್ಕಾರಕ್ಕೆ ಸರಿಯಾದ ದಾಖಲೆಗಳನ್ನು ನೀಡದೇ ವಾಹನಗಳು ಮತ್ತು ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗ್ತಿದೆ.
ಕೇವಲ ಸುಬ್ಬಾರೆಡ್ಡಿ ಮನೆ, ಕಚೇರಿ ಮಾತ್ರವಲ್ಲ.. ಸುಬ್ಬಾರೆಡ್ಡಿ ಸಂಬಂಧಿಕರ ಮನೆಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ 35 ಕಡೆಗಳಲ್ಲಿ, ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವೀಕ್ಷಕರೆ, ಕಾಂಗ್ರೆಸ್ ಶಾಸಕರ ಮೇಲೆ ನಡೆದಿರುವ ಇಡಿ ದಾಳಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.