Friday, July 11, 2025

Latest Posts

ಸಿದ್ದುಗೆ ಈ ದಯನೀಯ ಸ್ಥಿತಿ ಬರಬಾರದಿತ್ತು : ಡಿಕೆಶಿ ಸಿಎಂ ಕನಸು ಭಗ್ನ! ; ಕೈ ಕುಟುಕಿದ BJP

- Advertisement -

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ನಾಯಕತ್ವದ ಬದಲಾವಣೆಯಾಗುವುದಿಲ್ಲ. ಐದು ವರ್ಷಗಳ ಕಾಲ ನಾನೇ ಅಧಿಕಾರ ನಡೆಸುತ್ತೇನೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ನಡೆಯುತ್ತಿದ್ದ ಕುರ್ಚಿ ಕಲಹಕ್ಕೆ ರಾಷ್ಟ್ರ ರಾಜಧಾನಿಯಿಂದಲೇ ಖಡಕ್‌ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಭೇಟಿಗೂ ಮುನ್ನ ಹೊರಬಿದ್ದಿರುವ ಸಿದ್ದರಾಮಯ್ಯ ಅವರ ಈ ಹೇಳಿಕೆಯು ಇಡೀ ರಾಜಕಾರಣದ ಮಗ್ಗಲನ್ನೇ ಬದಲಿಸಿದಂತಾಗಿದೆ. ಅಲ್ಲದೆ ಕೈ ವರಿಷ್ಠರನ್ನೂ ಸಹ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಇನ್ನೂ ಈ ನಡುವೆಯೇ ಕೈ ಪಟ್ಟದ ಫೈಟ್‌ ಕುರಿತು ರಾಜ್ಯ ಬಿಜೆಪಿ ಸರಣಿ ಟ್ವೀಟ್‌ಗಳ ಮೂಲಕ ವ್ಯಂಗ್ಯವಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಿಎಂ ಕನಸು ಭಗ್ನವಾಗಿದೆ ಎಂದು ಛೇಡಿಸಿದೆ.

ಡಿಕೆಶಿ ಅವರಿಗೆ ಇರುವುದು ಕೇವಲ ಇಬ್ಬರ ಶಾಸಕರ ಬೆಂಬಲವಂತೆ!, ಇಬ್ಬರು ಬೆಂಬಲಿಗರಿಂದ ಸಿಎಂ ಆಗುವುದಕ್ಕೆ ಆಗುತ್ತಾ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯನವರು ಎತ್ತಿದ್ದಾರೆ. ಯಾರೇ ಸಿಎಂ ಆದ್ರೂ ರಾಜ್ಯದ ಏಳಿಗೆ ಸಾಧ್ಯವಿಲ್ಲ. ಭ್ರಷ್ಟಾಚಾರ, ಅನಾಚಾರ, ಕೊಲೆ, ಸುಲಿಗೆ ನಿಲ್ಲುವುದಿಲ್ಲ. ಕಾಂಗ್ರೆಸ್ ತೊಲಗಿಸಿ, ಕರುನಾಡು ಉಳಿಸಿ ಎಂದು ಕಿಡಿಕಾರಿದೆ. ಛೇ ನಾನೇ ಸಿಎಂ, ನಾನೇ ಸಿಎಂ ಎಂದು ಪದೇ ಪದೇ ಸಾಬೀತುಪಡಿಸಿಕೊಳ್ಳಬೇಕಾದ ದಯನೀಯ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಅಲ್ಲದೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯೂ 5 ವರ್ಷ ನಾನೇ ಸಿಎಂ ಹೇಳಿಕೊಳ್ಳುವುದೇ ಸಿಎಂ ಸಿದ್ದರಾಮಯ್ಯ ಅವರ ದಿನಚರಿಯಾಗಿದೆ. ಕನ್ನಡಿಗರು 135 ಸೀಟು ಕೊಟ್ಟು ಗೆಲ್ಲಿಸಿದರೂ ಕರ್ನಾಟಕ್ಕೆ ಒಂದು ಸುಸ್ಥಿರ, ಸುಭದ್ರ ಕೊಡಲಾಗದ ರಾಹುಲ್‌ ಗಾಂಧಿ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಕನ್ನಡಿಗರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಟೀಕಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿದ್ದ ನಾಯಕತ್ವದ ಬದಲಾವಣೆಯ ವಿಚಾರ ಸದ್ಯಕ್ಕೆ ಹೈಕಮಾಂಡ್‌ ಅಂಗಳಕ್ಕೆ ತಲುಪಿದಂತಾಗಿದೆ. ಕಾಂಗ್ರೆಸ್‌ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಇವರುಗಳು ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

- Advertisement -

Latest Posts

Don't Miss