ಒಡಿಶಾ : ದೇಶದಲ್ಲಿ ಮಹಾರಾಷ್ಟ್ರದಂತೆಯೇ, ಬಿಹಾರದ ಚುನಾವಣೆ ಹೈಜಾಕ್ ಮಾಡಲು ಬಿಜೆಪಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯವರು ದೇಶಾದ್ಯಂತ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಬಚಾವೋ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಚುನಾವಣೆಗಳನ್ನು ಹೈಜಾಕ್ ಮಾಡಲು ಬಿಜೆಪಿಯು ಯತ್ನಿಸುತ್ತಿದೆ. ಇದಕ್ಕಾಗಿ ರಣತಂತ್ರಗಳನ್ನು ಹೆಣೆಯುತ್ತಿದ್ದು, ಇದು ಸಾಂವಿಧಾನಿಕ ವ್ಯವಸ್ಥೆಯ ಮೇಲಿನ ಗದಾ ಪ್ರಹಾರವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ರೈತರು, ಬಡವರು ಹಾಗೂ ಬುಡಕಟ್ಟು ಜನಾಂಗದವರ ಹಿತದೃಷ್ಟಿಯನ್ನು ಕಾಯುವ ಬದಲಿಗೆ ಅದಾನಿಯಂತಹ ಬೃಹತ್ ಉದ್ಯಮಿಗಳಿಗೆ ಸೇವೆ ಸಲ್ಲಿಸುತ್ತಿದೆ. ಉದ್ಯಮಿ ಅದಾನಿಯ ಅನುಕೂಲ ಹಾಗೂ ಲಾಭಕ್ಕಾಗಿಯೇ ಇಲ್ಲಿನ ಜಗನ್ನಾಥ ರಥವನ್ನು ನಿಲ್ಲಿಸಲಾಗಿದೆ. ಅಲ್ಲದೆ ಬುಡಕಟ್ಟು ಜನರನ್ನು ಭೂಮಿಯ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಒಡಿಶಾ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಇಲ್ಲಿ ಇದುವರೆಗೂ 40,000 ಜನರು ಕಾಣೆಯಾಗಿದ್ದಾರೆ. ಮೊದಲು ತಳ ಮಟ್ಟದ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಮಾನ್ಯತೆ ನೀಡುವುದಕ್ಕಾಗಿ ಜಾತಿ ಗಣತಿ ಮಾಡಿ ಎಂದು ಒಡಿಶಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಬುಡಕಟ್ಟು ಜನರಿಂದ ವಶ ಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾರೆ.
ಅರಣ್ಯ ಹಕ್ಕುಗಳ ಭೂಮಿಗಳನ್ನು ಬುಡಕಟ್ಟು ಜನಾಂಗಕ್ಕೆ ನೀಡಿಲ್ಲ. ಕಾಂಗ್ರೆಸ್ ಪೆಸಾ ಮತ್ತು ಬುಡಕಟ್ಟು ಮಸೂದೆಯನ್ನು ತಂದಿದೆ. ನಾವು ಈ ಕಾನೂನುಗಳನ್ನು ಜಾರಿಗೊಳಿಸುತ್ತೇವೆ ಹಾಗೂ ಬುಡಕಟ್ಟು ಜನಾಂಗದವರಿಗೆ ಅವರ ಭೂಮಿ ದೊರಕುವಂತೆ ನೋಡಿಕೊಳ್ಳುತ್ತೇವೆ ಎಂದು ಇದೇ ವೇಳೆ ಒಡಿಶಾ ಜನರಿಗೆ ರಾಹುಲ್ ಭರವಸೆ ನೀಡಿದ್ದಾರೆ. ಬಿಜೆಡಿ ತನ್ನ ಅಧಿಕಾರಾವಧಿಯಲ್ಲಿ ಮಾಡಿದಂತೆಯೇ ಒಡಿಶಾವನ್ನು ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ದೇಶದ ಚುನಾವಣಾ ಆಯೋಗವು ತನ್ನ ಕೆಲಸವನ್ನು ಮಾಡದೆ ಬಿಜೆಪಿಯ ಹಿತಾಸಕ್ತಿಗಾಗಿ ಶ್ರಮಿಸುತ್ತಿದೆ. ಅಲ್ಲದೆ ಈ ಬಂಡವಾಳಶಾಹಿಗಳು, ಉದ್ಯಮಿಗಳಿಗಾಗಿ ಅಧಿಕಾರದಲ್ಲಿದೆ. ಇದು ಈ ದೇಶದ ಜನಸಾಮಾನ್ಯರಿಗಾಗಿ ತನ್ನ ಕೆಲಸ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.