ದಾವಣಗೆರೆ : ಸಾಲದ ವಿಚಾರಕ್ಕೆ ಗಂಡನೊಬ್ಬ ಕಿರಿಕ್ ಮಾಡಿ ಪತ್ನಿಯ ಮೂಗನ್ನೇ ಕತ್ತರಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.
ಸಂಘದಲ್ಲಿ ಸಾಲ ಪಡೆದು ಕಂತು ಪಾವತಿಸದಿದ್ದಕ್ಕೆ ಕೋಪಗೊಂಡ ಮಹಿಳೆಯ ಗಂಡ ಅವಳ ಮೂಗನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ವಿಜಯ್ ಎನ್ನುವ ಪಾಪಿ ಪತಿ ಹೆಂಡತಿಯನ್ನದೇ ಅಮಾನವೀಯವಾಗಿ ತನ್ನ ಹಲ್ಲಿನಿಂದ ಹೆಂಡತಿ ವಿದ್ಯಾಳ ಮೂಗನ್ನು ಕಚ್ಚಿ ಕಟ್ ಮಾಡಿದ್ದಾನೆ.
ಇನ್ನೂ ಈ ದಂಪತಿ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪತ್ನಿ ವಿದ್ಯಾ ನಿಗದಿತ ಅವಧಿಯಂತೆ ಪ್ರತಿ ಮಾಸಿಕವಾಗಿ ಸಾಲದ ಕಂತನ್ನು ಭರಿಸುತ್ತ ಬಂದಿದ್ದಳು.
ಆದರೆ ಆರ್ಥಿಕ ಅಡಚಣೆಯ ಕಾರಣಕ್ಕೆ ಕಳೆದ ತಿಂಗಳಲ್ಲಿ 2 ವಾರ ಸಾಲದ ಕಂತನ್ನು ತುಂಬಿರಲಿಲ್ಲ. ಹೀಗಾಗಿ ಸಂಘದ ಸಿಬ್ಬಂದಿ ವಿದ್ಯಾಳ ಪತಿಗೆ ಕರೆಮಾಡಿ ಕಂತು ತುಂಬುವಂತೆ ಹೇಳಿದ್ದರು. ಆದರೆ ಕಂತು ತುಂಬದಿದ್ದಕ್ಕೆ ಪತ್ನಿಯ ಮೇಲೆ ಆಕ್ರೋಶಗೊಂಡ ವಿಜಯ್ ಜಗಳಕ್ಕಿಳಿದಿದ್ದಾನೆ, ಅಲ್ಲದೆ ಈ ವೇಳೆ ಮಾತಿಗೆ ಮಾತು ಬೆಳೆದು ಈ ಕೃತ್ಯವೆಸಗಿದ್ದಾನೆ. ಬಳಿಕ ತೀವ್ರ ಗಾಯಗೊಂಡಿರುವ ವಿದ್ಯಾಳನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರಾಕ್ಷಸಿ ಕೃತ್ಯಕ್ಕೆ ಕಾರಣನಾಗಿರುವ ಪತಿ ವಿಜಯ್ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.