ಬೆಂಗಳೂರು : ರಾಜ್ಯದಲ್ಲಿ ಸಿಎಂ ಖರ್ಚಿ ಕದನ ಇನ್ನೊಂದು ಹಂತಕ್ಕೆ ಹೋಗಿ ತಲುಪುವ ಲಕ್ಷಣಗಳು ಗೋಚರವಾಗುತ್ತಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಳಗೊಳಗೆ ಕೆಂಡಕಾರುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಹೊಸ ದಾರಿಯನ್ನು ಹುಡುಕಿಕೊಂಡಿದ್ದಾರೆ. ಆ ಹಾದಿ ಹಿಡಿದು ಸಿದ್ದು ಕಟ್ಟಿ ಹಾಕಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಘೋಷಿಸಿರುವಂತೆ ರಾಜ್ಯ ವಿಧಾನ ಪರಿಷತ್‌ನ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಕುರಿತು ಉಭಯ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪರಿಷತ್ ನೇಮಕಾತಿಗೆ ಸಂಬಂಧಪಟ್ಟಂತೆ ಡಿ.ಕೆ. ಶಿವಕುಮಾರ್ ಅಡ್ಡಗಾಲು ಹಾಕಿದ್ದಾರೆ.
ಪ್ರಮುಖವಾಗಿ ಪರಿಷತ್ತಿನ ಸದಸ್ಯರನ್ನಾಗಿಸಲು ಕೆಪಿಸಿಸಿಯ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ.ಜಿ. ಸಾಗರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹಾಗೂ ಅನಿವಾಸಿ ಭಾರತೀಯರ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಹೆಸರುಗಳ ಪಟ್ಟಿ ಸಿದ್ದವಾಗಿತ್ತು. ಆದರೆ ಇದು ರಾಜ್ಯಭವನಕ್ಕೆ ಪಟ್ಟಿ ರವಾನೆಯಾಗುವ ಮುನ್ನವೇ ಲೀಕ್ ಆಗಿದೆ. ಇದರ ಪರಿಣಾಮ ಈಗ ಸಂಪೂರ್ಣ ಲಿಸ್ಟ್ ಅನ್ನು ತಡೆಹಿಡಿಯಲಾಗಿದೆ. ಈ ಮೂಲಕ ಡಿಕೆ ಶಿವಕುಮಾರ್ ಹೊಸ ರಾಜಕೀಯದಾಟಕ್ಕೆ ಮುಂದಾಗಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಸಿದ್ದವಾಗಿದ್ದ ಪರಿಷತ್ ಸದಸ್ಯರ ಪಟ್ಟಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್., ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಅಂಕಿತ ಹಾಕಿದ್ದರು.
ಅಲ್ಲದೆ ತಮ್ಮ ಹೆಸರು ಪಟ್ಟಿಯಲ್ಲಿರುವುದು ಗೊತ್ತಾದ ತಕ್ಷಣವೇ ರಮೇಶ್ ಬಾಬು, ಆರತಿ ಕೃಷ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಲು ಬಂದಿದ್ದರು. ಆಗ ಸಿಎಂ ಆರತಿ ಕೃಷ್ಣ ಅವರಿಗೆ, ನೀವು ಈಗಾಗಲೇ ಅನಿವಾಸಿ ಭಾರತೀಯರ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಾ?. ವಿಧಾನ ಪರಿಷತ್ತಿನ ಒಂದು ವರ್ಷದ ಸದಸ್ಯತ್ವಕ್ಕೆ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.
ಇನ್ನೂ ತಮ ಅವಧಿ ಕೇವಲ ಒಂದು ವರ್ಷ ಎಂದು ತಿಳಿದ ಆರತಿಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಅವರು ತಕ್ಷಣವೇ ದೆಹಲಿಯ ನಾಯಕರನ್ನು ಸಂಪರ್ಕಿಸಿ ತಮ್ಮ ಅಳಲು ಹೇಳಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಭವನ ತಲುಪಬೇಕಾಗಿದ್ದ ಪಟ್ಟಿಗೆ ಬ್ರೇಕ್ ಬಿದ್ದಂತಾಗಿದೆ.
ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ್ದ ಶಿಫಾರಸ್ಸಿನ ಬದಲಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಆರತಿ ಕೃಷ್ಣ ಹೆಸರು ಪಟ್ಟಿಯಲ್ಲಿ ಸೇರಿತ್ತು. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ಒಬ್ಬೊಬ್ಬ ನಾಯಕರು ಮೂರರಿಂದ ನಾಲ್ಕು ಜನರ ಹೆಸರುಗಳನ್ನು ಸೂಚಿಸಿದ್ದರು. ಅವರಲ್ಲಿ ರಮೇಶ್‌ಬಾಬು ಹೆಸರಿಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ ಎರಡೂ ಕಡೆಯಿಂದಲೂ ಶಿಫಾರಸ್ಸಾಗಿತ್ತು. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ರಮೇಶ್‌ಬಾಬು ಅವರ ಹೆಸರು ಸರ್ವಾನುಮತದಿಂದ ಆಯ್ಕೆಯಾಗಿತ್ತು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಒತ್ತಡವನ್ನೂ ಹಾಕಿದ್ದರೂ.
ಮುಖ್ಯವಾಗಿ ಆರತಿಕೃಷ್ಣ ತಂಟೆಯಿಂದ ಪಟ್ಟಿ ಇನ್ನೂ ಹಾಗೆ ಬಿದ್ದಿದೆ. ಈ ನಡುವೆಯೇ ತಾವು ಸೂಚಿಸಿರುವ ಬೆಂಬಲಿಗರ ಹೆಸರು ಪಟ್ಟಿಯಲ್ಲಿ ಇಲ್ಲದ್ದನ್ನು ಕಂಡು ಡಿಕೆಶಿ ಆಕ್ರೋಶಿತರಾಗಿದ್ದಾರೆ. ಆದರೆ ಆರಂಭದಲ್ಲಿ ಪಟ್ಟಿಗೆ ಸಹಿ ಹಾಕುವ ವೇಳೆ ತಮಗೆ ಹಿನ್ನಡೆಯಾಗಿದ್ದರೂ ಕೂಡ ಹಾಗೆ ಅಂಕಿತ ಹಾಕಿ ಪಾಸ್ ಮಾಡಿದ್ದಾರೆ. ಆದರೆ ತಮ್ಮ ಬೆಂಬಲಿಗರಿಗೆ ಅನ್ಯಾಯವಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಪಟ್ಟಿಯಲ್ಲಿನ ಲೋಪಗಳನ್ನು ಖಂಡಿಸಿದ್ದಾರೆ.
ಇನ್ನೂ ಇದರ ಮಧ್ಯಯೇ ಮತ್ತಷ್ಟು ಅಸಮಾಧಾನಗಳು ಸ್ಫೋಟವಾಗುತ್ತಿವೆ. ಡಿ.ಕೆ. ಶಿವಕುಮಾರ್ ಅವರು ಬಿ.ಎಲ್. ಶಂಕರ್ ಮತ್ತು ವಿನಯ್ ಕಾರ್ತಿಕ್ ಅವರ ಹೆರುಗಳನ್ನು ವಿಧಾನ ಪರಿಷತ್ತಿಗೆ ಶಿಫಾರಸು ಮಾಡಲು ಸೂಚನೆ ನೀಡಿದ್ದರು.
ಅಲ್ಲದೆ ಸಿದ್ದರಾಮಯ್ಯ ಅವರ ಕಡೆಯಿಂದ ದಿನೇಶ್ ಅಮೀನ್ ಮಟ್ಟು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕಡೆಯಿಂದ ಡಿ.ಜಿ. ಸಾಗರ್ ಅವರ ಹೆಸರುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಇನ್ನೂ ರಮೇಶ್‌ಬಾಬು ಜೆಡಿಎಸ್‌ನಿಂದ ಬಂದು ಬಹಳ ದಿನಗಳಾಗಿಲ್ಲ, ಪಕ್ಷ ಸೇರ್ಪಡೆಯಾಗಿ ಕಡಿಮೆ ಅವಧಿಯಲ್ಲಿ ಪರಿಷತ್ತಿನ ಸದಸ್ಯತ್ವ ಸ್ಥಾನ ನೀಡುತ್ತಿರುವುದೇಕೆ? ನಾವು ಹಲವಾರು ವರ್ಷಗಳಿಂದ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ. ನಮನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಸಾಕಷ್ಟು ಜನ ನಿಷ್ಠಾವಂತರು ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಆದರೆ ಸದ್ಯದಲ್ಲಿ ನಡೆಯುತ್ತಿರುವ ರಾಜಕಾರಣದ ಬೆಳವಣಿಗೆಗಳಲ್ಲಿಯೇ ಈ ಪಟ್ಟಿಗೆ ತಡೆ ನೀಡಲಾಗಿದ್ದು, ಈ ಸನ್ನಿವೇಶವನ್ನೂ ಡಿಕೆ ಶಿವಕುಮಾರ್ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವಂತಾಗಿದೆ. ನಾಮನಿರ್ದೇಶಿತ ಸದಸ್ಯತ್ವರ ತಕರಾರಿಗೆ ಪಟ್ಟಿಗೆ ತಡೆ ನೀಡಿರುವ ಹೈಕಮಾಂಡ್ ಮುಂದೆ ಯಾವ ನಡೆ ಅನುಸರಿಸುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.