Wednesday, July 16, 2025

Latest Posts

ಬಿಹಾರದಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಶಾಕ್!‌ : ವೋಟರ್‌ ಲಿಸ್ಟ್‌ನಿಂದ 35 ಲಕ್ಷ ಹೆಸರುಗಳಿಗೆ ಕೊಕ್!

- Advertisement -

ನವದೆಹಲಿ : ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸುವ ಬಿಹಾರದಲ್ಲಿ ಮುಂಬರುವ ಅಕ್ಟೋಬರ್‌ – ನವೆಂಬರ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಒಟ್ಟು 243 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಎನ್‌ಡಿಎ ಬಹುಮತ ಹೊಂದಿದೆ. ಸದ್ಯ ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದಾರೆ.

ಆದರೆ ಮತ್ತೊಮ್ಮೆ ರಾಜ್ಯದ ಅಧಿಕಾರವನ್ನು ತೆಕ್ಕೆಗೆ ಪಡೆಯುವಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಸಿದ್ದತೆ ನಡೆಸುತ್ತಿದೆ. ಅಲ್ಲದೆ ವಿಪಕ್ಷಗಳಾದ ಆರ್‌ಜೆಡಿ, ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳೂ ಸಹ ಅಧಿಕಾರದ ಕನಸನ್ನು ಕಾಣುತ್ತಿವೆ.

ಇನ್ನೂ ಈ ನಡುವೆಯೇ ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗ ಶಾಕ್‌ ನೀಡಿದೆ. ಬಿಹಾರದಲ್ಲಿ ಕೈಗೊಂಡಿರುವ ಮತಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನದಲ್ಲಿ ಬರೋಬ್ಬರಿ 35 ಲಕ್ಷ ಹೆಸರುಗಳನ್ನು ಕೈಬಿಡಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ನಡೆಸಲಾಗಿದೆ. ಅದರಲ್ಲಿ ನಿಧನ ಹೊಂದಿದ 12.55 ಲಕ್ಷ ನೋಂದಾಯಿತ ಮತದಾರರು ಕಂಡು ಬಂದಿದ್ದಾರೆ. ಇದಲ್ಲದೆ ಸುಮಾರು 17.34 ಲಕ್ಷ ಮತದಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇದರ ಹೊರತಾಗಿಯೂ 5.76 ಲಕ್ಷ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಹೀಗಾಗಿ ಆಯೋಗ ದಿಟ್ಟ ಕ್ರಮಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಒಟ್ಟಾರೆಯಾಗಿರುವ 7.90 ಕೋಟಿ ಮತದಾರರ ಪೈಕಿ 6.60 ಕೋಟಿ ಮತದಾರರು ನಿಗದಿತ ದಾಖಲೆಗಳನ್ನು ಸಲ್ಲಿಸಿದ್ದಾರೆ. ಎಸ್‌ಐಆರ್‌ನಲ್ಲಿ ಭರ್ತಿ ಮಾಡಿದ ಎಲ್ಲ ದಾಖಲೆಗಳನ್ನು ಸಲ್ಲಿಸಲು 11 ದಿನ ಬಾಕಿಯಿದೆ.

ಹೀಗಾಗಿ ಬೂತ್‌ ಮಟ್ಟದ ಅಧಿಕಾರಿಗಳ ಬಿಎಲ್‌ಒಗಳು ತಂಡ ಎರಡು ಸುತ್ತಿನ ಮನೆ – ಮನೆಗೆ ಭೇಟಿ ನೀಡಿದ ನಂತರ ಬಿಹಾರದ 7,89,69,844 ಮತದಾರರ ಪೈಕಿ 6,60,67,208 ಅಂದರೆ ಶೇಕಡಾ 83.66 ಮತದಾರರಿಂದ ನಿಗದಿತ ನಮೂನೆಯಲ್ಲಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇನ್ನುಳಿದಂತೆ ಶೇಕಡಾ 11.82ರಷ್ಟು ಜನರು ದಾಖಲೆ ಸಲ್ಲಿಕೆಗೆ ಸಮಯ ಪಡೆದುಕೊಂಡಿದ್ದಾರೆ.

ಇನ್ನೂ ಈ ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಅಲ್ಲದೆ ಆಯೋಗದ ಈ ನಿರ್ಧಾರವು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿವಾದದ ಸ್ವರೂಪ ಪಡೆದಿರುವ ಈ ಪರಿಷ್ಕರಣೆಯು ಸುಪ್ರೀಂಮೆಟ್ಟಿಲನ್ನೂ ಏರಿದೆ.

ಅಲ್ಲದೆ ಮುಖ್ಯವಾಗಿ ಬಿಹಾರದಂತೆ ರಾಜ್ಯದಲ್ಲಿಯೂ ನಕಲಿ ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆಯಾ? ಎನ್ನುವ ಪ್ರಶ್ನೆಗಳು ಸೃಷ್ಟಿಯಾಗಿವೆ. ಈಗಾಗಲೇ ವಿಧಾನಸಭಾ ಚುನಾವಣೆ ಮುಗಿದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗ ಕೈ ಹಾಕಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss