ಬೆಂಗಳೂರು : ಬಿಜೆಪಿಗೆ ರಾಷ್ಟ್ರಾಧ್ಯಕ್ಷರ ನೇಮಕಕ್ಕೂ ಮುನ್ನವೇ ಮೋದಿ ಸರ್ಕಾರದ ಸಂಪುಟದಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಷ್ಟು ದಿನಗಳಿಂದ ಬಾಕಿ ಉಳಿದಿದ್ದ ನೂತನ ರಾಷ್ಟ್ರಾಧ್ಯಕ್ಷರ ನೇಮಕಕ್ಕೆ ಇನ್ನಷ್ಟು ದಿನಗಳು ಕಾಯಲೇಬೇಕಾಗಿದೆ. ಬಿಹಾರ ಚುನಾವಣೆಯ ಬಳಿಕ ಬಿಜೆಪಿಗೆ ನೂತನ ಸಾರಥಿಯ ಆಯ್ಕೆಯಾಗಲಿದೆ ಎಂಬುವುದನ್ನು ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿವೆ. ಈಗಾಗಲೇ ಗೋವಾ ಸೇರಿದಂತೆ ಇತರೆಡೆ ರಾಜ್ಯಪಾಲರುನ್ನು ನೇಮಕ ಮಾಡಲಾಗಿದೆ. ಅಲ್ಲದೆ ಖಾಲಿ ಇದ್ದ ರಾಜ್ಯಸಭಾ ಸದಸ್ಯ ಸ್ಥಾನಕ್ಕೂ ನಾಮನಿರ್ದೇಶನದ ಪ್ರಕ್ರಿಯೆ ಪೂರ್ಣಗೊಂಡಿದೆ. ಹೀಗಾಗಿ ಈ ಬಳಿಕ ಸರ್ಕಾರದಲ್ಲಿ ಕೆಲವು ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಒಂದು ವೇಳೆ ಬಿಹಾರದ ಚುನಾವಣೆಯ ಮುನ್ನವೇ ಸಂಪುಟ ವಿಸ್ತರಣೆಯಾದರೆ ಮಿತ್ರ ಪಕ್ಷಗಳಾದ ಜೆಡಿಯು, ಎಲ್ಜೆಪಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಅಲ್ಲದೆ ಟಿಡಿಪಿಗೂ ಅಧಿಕ ಸ್ಥಾನಗಳನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ಹೊಸ ರೂಪ ನೀಡುವ ಸಾಧ್ಯತೆಗಳು ಕಂಡುಬರುತ್ತಿವೆ. ಮುಖ್ಯವಾಗಿ ಈಗಾಗಲೇ ಇರುವ ಕೆಲವು ಸಚಿವರನ್ನು ಪಕ್ಷದ ಸಂಘಟನೆಯ ಕಡೆಗೆ ಕಳುಹಿಸಬಹುದು, ಐದು ವರ್ಷದಲ್ಲಿ ಒಂದೇ ಖಾತೆಯನ್ನು ನಿಭಾಯಿಸುತ್ತಿರುವವರ ಖಾತೆ ಬದಲಾವಣೆಯಾಗಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಅಲ್ಲದೆ ಇನ್ನಷ್ಟು ಯುವ ಸಂಸದರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಒಲವು ವ್ಯಕ್ತಪಡಿಸಿದ್ದಾರೆ. ಅನುಭವಿ ಹಿರಿಯ ಸಚಿವರನ್ನು ಹೊರತುಪಡಿಸಿ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕುವ ಲಕ್ಷಣಗಳು ದಟ್ಟವಾಗಿವೆ. ಈ ಮೂಲಕ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ವೇದಿಕೆ ಸಿದ್ದವಾಗುತ್ತಿದೆ.
ಸದ್ಯ ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಎನ್ಡಿಎ ಮಿತ್ರಕೂಟ ಸಂಪುಟ ವಿಸ್ತರಣೆ ಹಾಗೂ ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷರ ನೇಮಕದ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ, ರಾಷ್ಟ್ರಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೂ ಬಿಹಾರ ಚುನಾವಣೆಯ ಬಳಿಕವೇ ಉತ್ತರ ಸಿಗಲಿದೆ.