ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ ಮೇಲೆ ಮೂರೇ ತಿಂಗಳಲ್ಲಿ ಇವರಿಬ್ಬರ ದಾಂಪತ್ಯ ಮುರಿದು ಬಿದ್ದಿದೆ. ಹೌದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಘಟನೆ ಎಲ್ಲರ ಗಮನ ಸೆಳೆದಿದೆ. ಪತಿ ತಾತಪ್ಪ ತನ್ನ ಹೆಂಡತಿ ಗದ್ದೆಮ್ಮನ ವಿರುದ್ಧ, ತನ್ನನ್ನು ಕೊಲೆ ಮಾಡೋ ಉದ್ದೇಶದಿಂದ ನದಿಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಾತಪ್ಪ ನದಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ಗಂಡನೇ ಕಾಲು ಜಾರಿ ಬಿದ್ದಿದ್ದಾನೆ ಎಂದು ಪತ್ನಿ ಹೇಳಿದ್ದಾಳೆ. ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರ ಸಂಬಂಧ ಮುರಿದುಬಿದ್ದಿದೆ.
ಘಟನೆ ನಂತರ ಸ್ಥಳೀಯ ಹಿರಿಯರು ಮತ್ತು ಗ್ರಾಮ ಪಂಚಾಯಿತಿ ತಕ್ಷಣ ಕೂಡಿ, ತಾತಪ್ಪ ಮತ್ತು ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಪಡೆಯುವ ಮೂಲಕ ಸಮಸ್ಯೆ ಶಾಂತಿಪೂರ್ವಕವಾಗಿ ಪರಿಹರಿಸಲು ಯತ್ನಿಸಿದ್ದಾರೆ. ಗದ್ದೆಮ್ಮ ಹಾಗೂ ಕುಟುಂಬಸ್ಥರು ಮರ್ಯಾದೆಗೆ ಹೆದರಿ ಈಗ ಮನೆಯನ್ನು ಬೀಗ ಹಾಕಿಕೊಂಡು ದೂರವಿದ್ದಾರೆ.
ಗಂಡ ನದಿಗೆ ಬಿದ್ದ ತಕ್ಷಣ ಪತ್ನಿ ಅವನಿಗೆ ಚಪ್ಪಲಿ ತೋರಿಸಿದ್ದಾಳೆ. ಅವಳಿಗೆ ಅವನು ಇಷ್ಟವಿಲ್ಲದ ಕಾರಣ ಚಪ್ಪಲಿ ತೋರಿಸಿದ್ದಾಳೆ. ನದಿಗೆ ಬಿದ್ದ ತಕ್ಷಣ ಅವಳ ಚಿಕ್ಕಮ್ಮಳಿಗೆ ಕರೆ ಮಾಡಿದ್ದಾಳೆ. ಗಂಡ ನದಿಗೆ ಬಿದ್ದಾಗ ಸಹಾಯ ಮಾಡಿ ಎಂದು ಜನರ ಕರೆಯಬೇಕು. ಆದ್ರೆ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ರಿಂದ ತಾತಪ್ಪಗೆ ಸಿಟ್ಟು ಬಂದಿದೆ. ಹಾಗಾಗಿ ಅವಳಿಗೆ ವಿಚ್ಛೇದನ ನೀಡಲು ಎರಡು ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ತಾತಪ್ಪನ ಸಹೋದರ ಅಶೋಕ್ ಸ್ಪಷ್ಟಪಡಿಸಿದ್ದಾರೆ.