ಬೆಂಗಳೂರು : ರಾಜ್ಯಕ್ಕೆ ಆಗಮಿಸಿ ಶಾಸಕರ ಬಳಿಕ ಸಚಿವರೊಂದಿಗೆ ಸಭೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೈ ಮಂತ್ರಿಗಳಿಗೆ ಶಾಕ್ ನೀಡುತ್ತಿದ್ದಾರೆ. ಸಚಿವರ ಬಗ್ಗೆ ಶಾಸಕರಿಂದ ದೂರು ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಮಂತ್ರಿಗಳ ಬಳಿ ಅವುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ಬಳಿಕ ಇದೀಗ ಸಚಿವರ ರಿಪೋರ್ಟ್ ಕಾರ್ಡ್ ಕೂಡ ಪಡೆದಿದ್ದಾರೆ. ನೇರವಾಗಿ ಸಚಿವರ ಕಾರ್ಯವೈಖರಿಯ ಪಟ್ಟಿಯನ್ನು ಹೈಕಮಾಂಡ್ ನಾಯಕರ ಕೈಗೆ ಇಡಲಿದ್ದಾರೆ. ಇದರಿಂದ ಸಿದ್ದರಾಮಯ್ಯ ಸಂಪುಟದ ಸಚಿವರಲ್ಲಿ ಢವ ಢವ ಶುರುವಾಗಿದೆ.
ಸಚಿವರ ಕಾರ್ಯವೈಖರಿಯನ್ನು ಆಧರಿಸಿ ಯಾರು ಮುಂದುವರೆಯಬೇಕು ಅಥವಾ ಯಾರಿಗೆ ಕೊಕ್ ನೀಡಬೇಕು ಎನ್ನುವ ನಿರ್ಧಾರವಾಗಲಿದೆ. ಇದಕ್ಕೂ ಮುನ್ನ ಸಚಿವರ ಕಾರ್ಯವೈಖರಿಯ ಬಗ್ಗೆ ಸ್ವತಃ ಎಐಸಿಸಿಯು ಈ ನಿಟ್ಟಿನಲ್ಲಿ ಸುದೀರ್ಘ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಎಲ್ಲಾ ಸಚಿವರು ನಿಮ್ಮ ನಿಮ್ಮ ಕಾರ್ಯವೈಖರಿಯ ವರದಿಯನ್ನು ನೀಡುವಂತೆ ಡಿಕೆಶಿ ಸಚಿವರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.
ಹೀಗಾಗಿ ಸಚಿವರು ತಾವು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಈವರೆಗೆ ಇಲಾಖಾವಾರು ಮತ್ತು ಸಂಘಟನಾವಾರು ಕೆಲಸ ಕಾರ್ಯಗಳ ಬಗ್ಗೆ ಅಂಕಿ ಅಂಶಗಳನ್ನು ಕಲೆಹಾಕಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ವರದಿಯನ್ನು ನೀಡಲಾಗಿತ್ತು. ಈ ವರದಿಯನ್ನು ಕ್ರೋಡೀಕರಿಸಿ ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸುರ್ಜೇವಾಲಾ ಅವರಿಗೆ ನೀಡಿದ್ದು. ಈ ವರದಿ ಶೀಘ್ರದಲ್ಲೇ ಎಐಸಿಸಿ ನಾಯಕರ ಕೈಸೇರಲಿದೆ.
ಇನ್ನೂ ಮುಖ್ಯವಾಗಿ ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ನಡುವೆ ಅಂತರ ಸೃಷ್ಟಿಯಾಗಿದೆ. ಇದನ್ನು ದೂರ ಮಾಡಲು ಹೈಕಮಾಂಡ್ ನಾಯಕರು ಸಚಿವರ ಕಾರ್ಯವೈಖರಿಯ ವರದಿಯನ್ನು ಚೆಕ್ ಮಾಡಿ ರಿಸಲ್ಟ್ ನೀಡಲಿದ್ದಾರೆ. ಇದಕ್ಕೂ ಮುನ್ನದ ಮಂತ್ರಿಗಳಿಗೆ ಉಸ್ತುವಾರಿ ಸುರ್ಜೇವಾಲಾ 60 ದಿನಗಳ ಬಿಗ್ ಟಾಸ್ಕ್ ನೀಡಿದ್ದಾರೆ.
ಮುಂಬರುವ 2 ತಿಂಗಳು ಎಲ್ಲ ಸಚಿವರ ಮೌಲ್ಯಮಾಪನ ಆಗಲಿದೆ. ಈ ಅವಧಿಯಲ್ಲಿ ಶಾಸಕರು ತಮ್ಮ ಕಾರ್ಯವೈಖರಿಯಲ್ಲಿ ಸುಧಾರಣೆ ಮಾಡಿಕೊಂಡ್ರೆ ಮಂತ್ರಿಗಿರಿಗೆ ಯಾವುದೇ ಆತಂಕವಿಲ್ಲ. ಇದಕ್ಕೂ ಮುನ್ನ ಒನ್ ಟು ಒನ್ ಸಭಯನ್ನೂ ನಡೆಸಲು ಹೈಕಮಾಂಡ್ ಪ್ಲ್ಯಾನ್ ರೂಪಿಸುತ್ತಿದೆ. ಇದಾದ ಬಳಿಕ ಇದರಲ್ಲಿ ಪಾಸ್ ಆದ ಸಚಿವರು ಸೇಫ್ ಆಗಿರಲಿದ್ದಾರೆ ಎನ್ನಲಾಗಿದೆ. ಈ 60 ದಿನ ಮಾತ್ರ ಮಂತ್ರಿಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿರಲಿದೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ನಾಯಕತ್ವದ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದವರೆಲ್ಲ ಹೈಕಮಾಂಡ್‌ನ ಈ ನಡೆಯಿಂದ ಸೈಲೆಂಟ್ ಆಗುವ ಸಾಧ್ಯತೆಗಳಿವೆ.