ತೆಲಂಗಾಣ : ಪಹಲ್ಗಾಮ್ ಸೇಡು ತೀರಿಸಿಕೊಳ್ಳಲೇಬೇಕು. ಆಪರೇಷನ್ ಸಿಂಧೂರ್ ಮುಂದುವರಿಸಿ. ಆ ನಾಲ್ವರು ಭಯೋತ್ಪಾದಕರನ್ನು ಹಿಡಿದು ಕೊಲ್ಲುವವರೆಗೂ, ನಾವು ನಿಮಗೆ ಈ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು AIMIM ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಗುಡುಗಿದ್ದಾರೆ. ತೆಲಂಗಾಣದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯಯನ್ನು ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಅಥವಾ ಕೊಲ್ಲುವವರೆಗೆ ಕೇಂದ್ರವು ಆಪರೇಷನ್ ಸಿಂಧೂರ್ ಅನ್ನು ಮುಂದುವರಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು 26 ಹಿಂದೂ ಪ್ರವಾಸಿಗರನ್ನು ಕೊಂದಿದ್ದಾರೆ, ಆದರೆ ಈಗ ರಾಜ್ಯಪಾಲರು ಘಟನೆಗೆ ತಾವೇ ಕಾರಣ ಎಂದು ಹೇಳುತ್ತಿದ್ದಾರೆ. ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಮನೋಜ್ ಸಿನ್ಹಾ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರು ಕಾರಣರಾಗಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಓವೈಸಿ ಒತ್ತಾಯಿಸಿದ್ದಾರೆ.
ಬಿಹಾರದಲ್ಲಿರುವ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳ ಬಗ್ಗೆ ನಿಮಗೆ ತಿಳಿದಿದೆ ಎಂದಾದರೆ, ಆ 4 ಜನ ಭಯೋತ್ಪಾದಕರು ಪಹಲ್ಗಾಮ್‌ಗೆ ಹೇಗೆ ತಲುಪಿದರು? ನೀವು ಅವರನ್ನು ಏಕೆ ತಡೆಯಲಿಲ್ಲ? ನೀವು ಬಿಹಾರದಲ್ಲಿರುವ ನೇಪಾಳಿಗಳ ಬಗ್ಗೆ ಮಾತನಾಡುತ್ತೀರಿ ಆದರೆ ಪಹಲ್ಗಾಮ್‌ನಲ್ಲಿರುವ ಭಯೋತ್ಪಾದಕರ ಬಗ್ಗೆ ತಿಳಿಯಲು ವಿಫಲರಾಗಿದ್ದೀರಿ. ನೀವು ನಿದ್ರಿಸುತ್ತಿದ್ದೀರಾ? ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಪಹಲ್ಗಾಮ್‌ಗೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದೀರಿ, ಆದ್ದರಿಂದ ನಾಲ್ವರು ಜನರನ್ನು ಹಿಡಿಯುವವರೆಗೆ ಅಥವಾ ಕೊಲ್ಲುವವರೆಗೆ ಆಪರೇಷನ್ ಸಿಂಧೂರ್ ಅನ್ನು ಮುಂದುವರಿಸಿ, ಇಲ್ಲದಿದ್ದರೆ ನಾವು ಇದನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಮೋದಿ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಸಂಸದ ಓವೈಸಿ ಕಿಡಿ ಕಾರಿದ್ದಾರೆ.
ಬಾಂಗ್ಲಾದೇಶದ ಮೇಲೆ ಚೀನಾ ತನ್ನ ಪ್ರಾಬಲ್ಯ ಮೆರೆಯುತ್ತಿರುವ ಹೊತ್ತಿನಲ್ಲಿಯೇ ದೇಶದಲ್ಲಿ ಮನೆಗಳನ್ನು ಕೆಡವುವುದು, ಬುಲ್ಡೋಜರ್‌ಗಳನ್ನು ಓಡಿಸುವುದು ಮತ್ತು ಮಸೀದಿಗಳ ವಿರುದ್ಧ ನಡೆಯುತ್ತಿರುವ ಕ್ರಮಗಳು ಒಳ್ಳೆಯದಲ್ಲ. ನಮ್ಮ ದೇಶವು ಪಾಕಿಸ್ತಾನ ಮತ್ತು ಚೀನಾದಿಂದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿಳಿಸಲು ಬಯಸುತ್ತೇನೆ. ಅವರು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ನಮಗೆ ಬೆದರಿಕೆಯಾಗಿರುವವರ ಮೇಲೆ ನೀವು ಗಮನಹರಿಸಬೇಕು ಎಂದು ಕೇಂದ್ರ ಸರ್ಕಾರದ ನಡೆಯನ್ನು ಓವೈಸಿ ಖಂಡಿಸಿದ್ದಾರೆ.