ಬೆಂಗಳೂರು : ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ವಿರೋಧಿಸಿ ಈಗ ಆ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿರುವ ಅವರು, ಬಿಹಾರದಲ್ಲಿ ಚುನಾವಣೆಗೂ ಮುನ್ನವೇ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ವಿರೋಧಿಸಿದವರೇ ಈಗ ಅವುಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಬಿಜೆಪಿಯವರು ತಾವು ಅಧಿಕಾರಕ್ಕೆ ಬರುವ ಮೊದಲು ಆಧಾರ್ ಕಾರ್ಡ್ ಕುರಿತು ವಿರೋಧ ಮಾಡಿದ್ದರು. ನರೇಗಾ ಯೋಜನೆಯನ್ನೂ ವಿರೋಧಿಸಿದ್ದರು. ನಮ್ಮ ಐದು ಗ್ಯಾರಂಟಿ ಯೋಜನೆಯ ಬಗ್ಗೆಯೂ ಟೀಕಿಸಿದ್ದರು. ಆದರೆ ಮಹಾರಾಷ್ಟ್ರ ಚುನಾವಣೆ, ಎಂಪಿ ಚುನಾವಣೆ, ಬಿಹಾರ ಚುನಾವಣೆಗಳಲ್ಲಿ ನಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ದೇಶದಲ್ಲಿ ಬಿಹಾರ ಹಿಂದುಳಿದಿದೆ, ಅಭಿವೃದ್ಧಿ ಹೊಂದದ ರಾಜ್ಯವಾಗಿದೆ. ಅದು ಅತಿ ಹೆಚ್ಚು ಅಪರಾಧ ನಡೆಯುವ ರಾಜ್ಯ ಆಗಿದೆ. ಕಡಿಮೆ ಜಿಡಿಪಿ, ಸೂಕ್ತ ಶಿಕ್ಷಣ ಇಲ್ಲ, ಕೈಗಾರಿಕೆ ಇಲ್ಲ. ಬಿಜೆಪಿ ಆಡಳಿತ ನಡೆಸುವ ರಾಜ್ಯಗಳಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ. ನಮ್ಮ ಜಿಡಿಪಿ ಹಣ ಸಹ ಅವರಿಗೆ ಹೋಗುತ್ತಿದೆ. ಇಷ್ಟು ಹಣ ಹೋಗಿದ್ರು, 15 ಮೇಲ್ಸೇತುವೆಗಳು ಕುಸಿದಿವೆ. ಬಿಜೆಪಿ ಆಡಳಿತ ನಡೆಸುವ ರಾಜ್ಯಗಳು ಉದ್ದಾರ ಆಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರ ಹಾಗೂ ಎನ್ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.