ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗಳು, ಉಚಿತ ಯೋಜನೆಗಳನ್ನು ನೀಡುವುದರಿಂದ ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುತ್ತದೆ. ರಾಜ್ಯದ ಅಭಿವೃದ್ದಿಯಾಗುವುದಿಲ್ಲ ಎಂದು ತೀವ್ರವಾಗಿ ಟೀಕಿಸಿದ್ದವು. ಅವುಗಳಿಗೆ ಡೋಂಟ್ ಕೇರ್ ಎನ್ನುವಂತೆ ಸಿದ್ದರಾಮಯ್ಯ ಸರ್ಕಾರ ಜನರಿಗೆ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿದೆ.
ಆದರೆ ಈ ಉಚಿತ ಯೋಜನೆಗಳು ಪ್ರಾರಂಭವಾಗಿ ಎರಡು ವರ್ಷಗಳು ಕಳೆಯುತ್ತಲಿದ್ದರೂ ಸಹ, ಅವುಗಳ ಬಗಗೆ ಇರುವ ಅಸಮಾಧಾನ, ಬೇಸರಗಳು ಇನ್ನೂ ತಣಿದಿಲ್ಲ ಎನ್ನುವುದು ಗಮನಾರ್ಹ. ಇನ್ನೂ ಇದೇ ವಿಚಾರಕ್ಕೆ ಮಾತನಾಡಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಉಚಿತ ಯೋಜನೆ ಕೊಡುವುದು ದೊಡ್ಡ ತಪ್ಪು, ಸರ್ಕಾರದ ಗ್ಯಾರಂಟಿಗಳು ಅಭಿವೃದ್ದಿಗೆ ಮಾರಕವಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವುದೇ ದೊಡ್ಡ ತಪ್ಪು, ಅಭಿವೃದ್ದಿಗೆ ದುಡ್ಡಿಲ್ಲ ಎಂದು ಹೇಳುವವರು ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುತ್ತಿದ್ದಾರೆ. ಈ ರೀತಿಯ ಯೋಜನೆಗಳು ಅಭಿವೃದ್ದಿಗೆ ಮಾರಕವಾಗಿದ್ದು, ಆರ್ಥಿಕ ಪರಿಸ್ಥಿತಿಯ ತಲ್ಲಣಕ್ಕೂ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕೆ ಬರುವುದನ್ನೇ ಗುರಿಯಾಗಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದರು. ಇವುಗಳನ್ನೇನೂ ಜನರು ಕೇಳಿರಲಿಲ್ಲ, ಆದರೂ ಜಾರಿ ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿಯೇ ಪ್ರತಿ ವರ್ಷ 25000 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ. ಹೀಗಾದಾಗ ಅಭಿವೃದ್ದಿಗೆ ಹಣ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ್ದಾರೆ. ತಾವು ಮಾಡಿರುವ ಗ್ಯಾರಂಟಿಗೆ ಹಣ ಖರ್ಚು ಮಾಡುತ್ತಿರುವುದನ್ನು ಸಮದೂಗಿಸಲು ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದಾರೆ. ಈಗಾಗಲೇ ವಿದ್ಯುತ್ ನೋಂದಣಿ ಶುಲ್ಕ, ಮದ್ಯ ಹೀಗೆ ವಿವಿಧ ರೀತಿಯಲ್ಲಿ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಇವರೆಲ್ಲ ಜನರ ಮೇಲೆ ತೆರಿಗೆ ಭಾರ ಹಾಕಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.