ರಾಜ್ಯದ ಹಲವೆಡೆ ನಿರಂತರ ವರುಣನ ಅಬ್ಬರ ಮುಂದುವರಿದಿದೆ. ಮಳೆಯ ಆರ್ಭಟದಿಂದ ಜನಜೀವನಕ್ಕೆ ಅಡಚಣೆ ಆಗಿದೆ. ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಚಿಕ್ಕಮಗಳೂರು ಸೇರಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆಯ ಅಲರ್ಟ್ ನೀಡಿದೆ.
ಚಿಕ್ಕಮಗಳೂರಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ. ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಜಿಲ್ಲೆಯ ಪ್ರಸಿದ್ಧ ಸ್ಥಳವಾದ ಮುಳ್ಳಯ್ಯನಗಿರಿ, ಕಲ್ಲತ್ತಿಗಿರಿ, ಹಬ್ಬೆ ಜಲಪಾತ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಚಾರಣ ಮಾಡುವ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಗುಡ್ಡ ಕುಸಿತ, ಧರೆ ತಗ್ಗುವ ಸಂಭವಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗೃತ ಕ್ರಮಕ್ಕೆ ಮುಂದಾಗಿದೆ.
ಹವಾಮಾನ ಇಲಾಖೆ ನೀಡಿರುವ ಆರೆಂಜ್ ಅಲರ್ಟ್ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಲದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ಉಳಿದ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಗುಡ್ಡ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಪ್ರವಾಸಿಗರು ಪ್ಲಾನ್ ಮಾಡಿದ್ರೆ, ಮುಂದಿನ ಐದು ದಿನಗಳ ಕಾಲ ಪ್ರವಾಸ ಮುಂದೂಡಿಕೊಳ್ಳುವುದು ಉತ್ತಮ.
ಮಳೆಯ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿ ಹಾಗೂ ಜೋಗ ಜಲಪಾತದ ಸುತ್ತ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ತೀವ್ರ ಗಾಳಿ ಸಹ ಜೊತೆಯಾಗಿದ್ದು, ಕಡಲ ತೀರದ ಜನರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ