ನವದೆಹಲಿ : ಗಣ್ಯರು, ರಾಜಕೀಯ ನಾಯಕರಿಗೆ ಭದ್ರತೆ ಅಧಿಕವಾಗಿರುತ್ತದೆ. ಹಲವು ರೀತಿಯ ಕಾರಣಗಳಿಗಾಗಿ ಅವರು ಪ್ರಯಾಣಿಸುವ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಅಲ್ಲದೆ ವಿವಿಐಪಿಗಳದ್ದು ಅವಸರದ ಜೀವನವಾಗಿರುತ್ತದೆ. ಒಂದು ಕಾರ್ಯಕ್ರಮದ ಬಳಿಕ ಇನ್ನೊಂದು ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕಿರುತ್ತದೆ.
ಹೀಗಾಗಿ ಗಡಿಬಿಡಿಯ ಬದುಕಿಗೆ ಒಗ್ಗಿರುತ್ತಾರೆ. ಆದರೆ ಕೆಲವೊಂದು ತಮ್ಮದೇ ಲೋಕದಲ್ಲಿರುವ ರಾಜಕಾರಣಿಗಳು ತಮ್ಮ ಜೊತೆಗಿದ್ದವರನ್ನೇ ಮರೆತು ಬಿಡುತ್ತಾರೆ. ಇದೇ ರೀತಿಯ ಪ್ರಸಂಗವೊಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬಂದೊದಗಿದೆ.
ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪತ್ನಿ ಸಾಧನಾ ಗುಜರಾತ್‌ನ ಪ್ರವಾಸದಲ್ಲಿದ್ದರು. ಅಲ್ಲಿನ ಜುನಾಗಢದ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ತೆರಳಿದ್ದ ಸಚಿವರು, ಸಿಬ್ಬಂದಿಯ ಜೊತೆಗೆ ಮಾತುಕತೆ ನಡೆಸಿದ್ದರು. ಬಳಿಕ ಅಲ್ಲಿಂದ ನೇರವಾಗಿ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿರುವ ಲಖ್‌ಪತಿ ದೀದೀಯರ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದರು. ಆದರೆ ಸಂಶೋಧನಾ ಕೇಂದ್ರದಲ್ಲಿಯೇ ಸಚಿವರಿಗಾಗಿ ಪತ್ನಿ ಸಾಧನಾ ಕಾಯುತ್ತ ಕುಳಿತಿದ್ದರು.
ಇನ್ನೂ ರಾತ್ರಿ 8 ಗಂಟೆಗೆ ವಿಮಾನವಿದ್ದುದರಿಂದ, ಅದೇ ಅವಸರದಲ್ಲಿ ಸಚಿವ ಸಿಂಗ್ ರಾಜ್ ಕೋಟ್ ಕಡೆಗೆ ಪಯಣ ಬೆಳೆಸಿದ್ದರು. ಕೆಲ ಸಮಯದ ನಂತರ ಪತ್ನಿ ಇಲ್ಲದಿರುವುದನ್ನು ಗಮನಿಸಿದ್ದಾರೆ. ತಕ್ಷಣ ತಮ್ಮ ವಾಹನವನ್ನು ಮತ್ತೆ ಜುನಾಗಢದ ಕಡೆಗೆ ರಿಟರ್ನ್ ತಿರುಗಿಸಿದ್ದಾರೆ. ನಂತರ ಅವರನ್ನು ಕರೆತರಲು 22 ಬೆಂಗಾವಲು ಪಡೆ ವಾಹನಗಳೊಂದಿಗೆ ವಾಪಸ್ಸಾಗಿರುವ ಘಟನೆ ನಡೆದಿದೆ. ಕೇಂದ್ರ ಸಚಿವರ ಈ ಅವಸರದ ಮರೆಗುಳಿತನಕ್ಕೆ ಜನರು ಶಾಕ್ ಆಗಿದ್ದಾರೆ.