ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯುವ ತಂತ್ರಗಳು ಬಿಜೆಪಿಯಲ್ಲಿ ನಡೆಯುತ್ತಿವೆ. ತನ್ನ ವಿರುದ್ಧ ಮುಗಿ ಬೀಳುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಇನ್ನೂ ಮೂವರು ಕೈ ನಾಯಕರು ಬಿಜೆಪಿಗೆ ತಲೆನೋವಾಗಿದ್ದಾರೆ. ಅವರಿಗೆ ಹೇಗಾದರೂ ಮಾಡಿ ಪ್ರಬಲವಾಗಿ ಕೌಂಟರ್ ನೀಡುವ ಸಿದ್ದತೆಗಳು ಕೇಸರಿ ಪಾಳಯದಲ್ಲಿ ಮುಂದುವರೆದಿವೆ.
ಬಿಜೆಪಿಯ ಹಿಟ್ ಲಿಸ್ಟ್ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಇದ್ದಾರೆ, ಅದರಲ್ಲಿ ಮುಖ್ಯವಾಗಿ ಒಬ್ಬರು ರಾಜಕೀಯ ಕಾರಣಕ್ಕೆ ಅದರಲ್ಲೂ ನೇರವಾಗಿ ಬಿಜೆಪಿ ನಾಯಕರ ಮೇಲೆ ಅಟ್ಯಾಕ್ ಮಾಡುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ನಂಬರ್ ಸ್ಥಾನದಲ್ಲಿದ್ದಾರೆ.
ಬಹು ಮುಖ್ಯವಾಗಿ ಕಳೆದ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು. ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಆರೋಪದ ಅಭಿಯಾನದ ರೂವಾರಿಯಾಗಿ ಇದೇ ಖರ್ಗೆ ಕೆಲಸ ನಿರ್ವಹಿಸಿದ್ದರು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದರು. ಜೊತೆಗೆ ಈ ಎರಡೂ ವಿಚಾರಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಲ್ಲಿಗೆ ತಲುಪಿಸೋಕೆ ಇವರ ಪಾತ್ರ ಮಹತ್ವದ್ದಾಗಿತ್ತು. ಇದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಹೆಸರು ಹೇಳಿದರೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗುತ್ತಾರೆ.
ಇನ್ನೂ ಬಿಜೆಪಿಯ ಹಿಂದೂತ್ವದ ವಿಚಾರಗಳನ್ನು ಕಟುವಾಗಿ ಟೀಕಿಸುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಎರಡನೇಯವರಾಗಿದ್ದಾರೆ. ಆರ್ಎಸ್ಎಸ್ ಸಿದ್ದಾಂತಗಳನ್ನು ಟೀಕಿಸುತ್ತಾ, ಸಾರ್ವಕರ್ ಅಂತಹ ಕಟ್ಟಾ ಸಂಘ ಪರಿವಾರದವರನ್ನು ವಿರೋಧಿಸುತ್ತಾರೆ. ಈ ಮೂಲಕ ಹರಿಪ್ರಸಾದ್ ಬಿಜೆಪಿ ಅಷ್ಟೇ ಅಲ್ಲದೆ ಆರ್ಎಸ್ಎಸ್ ಟಾರ್ಗೆಟ್ ಕೂಡ ಆಗಿದ್ದಾರೆ. ಯಾವುದೇ ಅಂಜಿಕೆ, ಅಳುಕಿಲ್ಲದೆ ನೇರವಾಗಿ ಪ್ರಶ್ನಿಸುತ್ತಾರೆ, ಇವರ ಮಾತುಗಳು ಕೇಸರಿ ನಾಯಕರ ಇರುಸು ಮುರುಸಿಗೆ ಕಾರಣವಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಹರಿಪ್ರಸಾದ್ ಇತ್ತೀಚಿಗೆ ಅರ್ಧನಾರೀಶ್ವರನ ಹೇಳಿಕೆಯು ವ್ಯಾಪಕ ಕೋಲಾಹಲಕ್ಕೆ ಕಾರಣವಾಗಿತ್ತು.
ಅಲ್ಲದೆ ತಮ್ಮದೇ ಸೈದ್ದಾಂತಿಕ ಬದ್ದತೆಯೊಂದಿಗೆ, ಸಿದ್ದಾಂತಗಳಲ್ಲಿ ರಾಜೀಯಾಗದ ನಿಲುವಿನೊಂದಿಗೆ ಹೋರಾಡುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೂರನೇ ಟಾರ್ಗೆಟ್ ಆಗಿದ್ದಾರೆ.
ಕೇಂದ್ರ ಸರ್ಕಾರದ ವೈಫಲ್ಯಗಳು, ದೇಶದ ಜನರಿಗೆ ಕೇಂದ್ರದ ನೀತಿಗಳಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಯಾರ ಮುಲಾಜಿಗೂ ಒಳಗಾಗದೇ ಬಿಜೆಪಿ ನಾಯಕರ ಮೇಲೆ ಮಾತಿನ ದಾಳಿ ನಡೆಸುವ ಸಚಿವ ಲಾಡ್ ಬಿಜೆಪಿಯವರ ಬೆವರಿಳಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ವಿಚಾರದಲ್ಲೂ ನೇರವಾಗಿ ಅಂಕಿ – ಅಂಶಗಳ ಸಮೇತ ಜನರ ಮುಂದಿಡುತ್ತಾರೆ. ಸಿಡಿಗುಂಡಿನಂತಹ ಇವರ ಮಾತುಗಳು ಸಾಕಷ್ಟು ಬಿಜೆಪಿಗರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರಣವಾಗುತ್ತವೆ. ಇನ್ನೂ ಪ್ರಮುಖವಾಗಿ ಈ ಎಲ್ಲ ಕಾರಣಗಳಿಗಾಗಿ ಈ ಮೂವರು ಕೈ ಪ್ರಭಾವಿ ನಾಯಕರುಗಳು ಬಿಜೆಪಿಯ ನಿದ್ದೆಗೆಡಿಸಿದ್ದಾರೆ.