ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಿಮ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರೀಕ್ಷಾ ಒತ್ತಡವೇ ಆತ್ಮಹತ್ಯೆಗೆ ಕಾರಣ ಎನ್ನಲಾಗ್ತಿದೆ. 20 ವರ್ಷದ ಭರತ್ ಎತ್ತಿನಮನೆ, ಕೊಪ್ಪಳ ಮೂಲದವನು. ಮಿಮ್ಸ್‌ನಲ್ಲಿ ಮೊದಲ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಜುಲೈ 20ರ ಭಾನುವಾರ ಮಧ್ಯರಾತ್ರಿ ಹಾಸ್ಟೆಲ್ ರೂಮಿನ ಫ್ಯಾನಿಗೆ, ನೇಣು ಹಾಕಿಕೊಂಡಿದ್ದಾನೆ. ಬೆಳಗ್ಗೆ ಸ್ನೇಹಿತರು ರೂಮಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಭರತ್ ಪುಟ್ಬಾಲ್ ಆಟಗಾರನಾಗಿದ್ದ. ಕಳೆದ ಸೆಮಿಸ್ಟರ್ ನಲ್ಲಿ ಹೆಚ್ಚಾಗಿ ಕಾಲೇಜಿಗೆ ಹಾಜರಾಗದ ಕಾರಣ, ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಈ ವರ್ಷ ಕ್ಲಿಯರ್ ಮಾಡಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದ. ಬಾಕಿ ಉಳಿದ ವಿಷಯಗಳ, ಪರೀಕ್ಷಾ ಶುಲ್ಕ ಪಾವತಿಸಲು ಬಂದಿದ್ದ. ಹಾಸ್ಟೆಲಿಗೆ ಬಂದಾಗ ಸ್ನೇಹಿತರು ಇರಲಿಲ್ಲ. ಆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕೆ ವ್ಯಕ್ತವಾಗಿದೆ.
ಮಂಡ್ಯ ಪೂರ್ವ ಠಾಣೆ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಭರತ್ ಜೊತೆ ರೂಮಲ್ಲಿದ್ದ ಇಬ್ಬರು ಊರಿಗೆ ಹೋಗಿದ್ರು. ರಾತ್ರಿ 12 ಗಂಟೆವರೆಗೆ ಸ್ನೇಹಿತರ ಜೊತೆ ಮಾತನಾಡಿದ್ದಾನೆ. ಬೆಳಗ್ಗೆ ಮತ್ತೊಬ್ಬ ಸ್ನೇಹಿತ ಬಂದು ನೋಡಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಅಂತಾ ಹೇಳಿದ್ದಾರೆ.
ಜುಲೈ 20ರಂದು ಇದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು, ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಜಾ ಇದ್ದಿದ್ರಿಂದ ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು, ಕಾವೇರಿ ಹಿನ್ನೀರಿನ ಜಾಗಕ್ಕೆ ಪ್ರವಾಸಕ್ಕೆ ಹೋಗಿದ್ರು. ಒಟ್ಟು 6 ಸ್ನೇಹಿತರು ನೀರಿನಲ್ಲಿ ಆಟವಾಡುತ್ತಿದ್ದಾರೆ. ಆ ವೇಳೆ ಪ್ರಶಾಂತ್, ಸಿದ್ದೇಶ್, ಕೃಷ್ಣ ಆಳಕ್ಕೆ ಹೋಗಿದ್ದು, ನೀರಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಶಾಕ್‌ನಿಂದ ಹೊರ ಬರುವ ಮುನ್ನವೇ, ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.