Tuesday, July 22, 2025

Latest Posts

ಜಿಎಸ್​​​ಟಿ ನೋಟಿಸ್ : ನಿಮ್ಮ ನಾಯಕತ್ವದ ಹಣಕಾಸು ಇಲಾಖೆ ಮೌನವಾಗಿದೆ ; ಪತ್ರದ ಮೂಲಕ ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ!

- Advertisement -

ಬೆಂಗಳೂರು : ರಾಜ್ಯದಲ್ಲಿ ಯುಪಿಐ ಹಾಗೂ ಡಿಜಿಟಲ್​ ವಹಿವಾಟು ಆಧರಿಸಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ದಂಡದ ಜೊತೆ ಜಿಎಸ್​ಟಿ ಪಾವತಿ ಮಾಡುವಂತೆ ನೋಟಿಸ್​ ನೀಡುತ್ತಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಗಣನೀಯ ಸಂಖ್ಯೆಯಲ್ಲಿ ಸಣ್ಣ ವ್ಯಾಪಾರಸ್ಥರು ಡಿಜಿಟಲ್​ ಪಾವತಿಗಳನ್ನು ಬಿಟ್ಟು ನಗದು ವಹಿವಾಟಿಗೆ ಮರಳುತ್ತಿದ್ದಾರೆ. ಅಲ್ಲದೆ ಸರ್ಕಾರದ ನೋಟಿಸ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ನಡುವೆಯೇ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಣ್ಣ ವ್ಯಾಪಾರಿಗಳಿಗೆ ಯುಪಿಐ ಸಂಬಂಧಿತ ನೋಟಿಸ್ ಮತ್ತು ಡಿಜಿಟಲ್ ಪಾವತಿಗಳಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವ ತುರ್ತು ಅಗತ್ಯತೆಗೆ ಗಮನ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಅಲ್ಲದೆ ರಾಜ್ಯ ಸರ್ಕಾರದ ನೋಟಿಸ್​​ನಿಂದ ಸಣ್ಣ, ಪುಟ್ಟ ವ್ಯಾಪಾರಿಗಳು, ಬೇಕರಿಗಳು ಸೇರಿದಂತೆ ವರ್ತಕರ ತೊಂದರೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇನ್ನೂ ನಿಖಿಲ್ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿನ ಅಂಶಗಳನ್ನು ಗಮನಿಸಿದಾಗ ಕಾರ್ಮಿಕ ವರ್ಗ, ವ್ಯಾಪಾರಿಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ಡಿಜಿಟಲ್ ಪಾವತಿಗಳ ಪ್ರವರ್ತಕ ಎಂದು ಪ್ರಶಂಸಿಸಲ್ಪಡುತ್ತಿದೆ. ಈ ಸಮಯದಲ್ಲಿ, ಕರ್ನಾಟಕವು ಈ ಜಾಗತಿಕ ನಾಯಕತ್ವವನ್ನು ದುರ್ಬಲಗೊಳಿಸುವ, ಬೆದರಿಕೆಯೊಡ್ಡುವ ಆತಂಕಕಾರಿ ಪ್ರವೃತ್ತಿಯನ್ನು ನೋಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಯುಪಿಐ ವಹಿವಾಟು ದತ್ತಾಂಶದ ಆಧಾರದ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ಬೇಕರಿಗಳು, ಮಾರಾಟಗಾರರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ನೀಡುತ್ತಿರುವ ನೋಟಿಸ್​​ಗಳ ಹೆಚ್ಚಳವು ಗೊಂದಲ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ರಾಜ್ಯದ ದುರ್ಬಲ ಆರ್ಥಿಕ ಸ್ಥಿತಿ ಮತ್ತು ಹೆಚ್ಚುತ್ತಿರುವ ಆದಾಯದ ಒತ್ತಡಗಳು ತೆರಿಗೆ ಅಧಿಕಾರಿಗಳ ಮೇಲೆ ಅಸಮಂಜಸ ಗುರಿಗಳನ್ನು ವಿಧಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಟೋಟ್​​ನಂತೆಯೇ ತೆರಿಗೆ ಸಂಗ್ರಹಕ್ಕೆ ಇಳಿದಂತೆ ಕಾಣುತ್ತಿದೆ. ತೆರಿಗೆ ಗುರಿಗಳನ್ನು ತಲುಪುವ ಪ್ರಯತ್ನದಲ್ಲಿ, ಅನೇಕ ಅಧಿಕಾರಿಗಳು ಸಣ್ಣ ಮತ್ತು ಪ್ರಾಮಾಣಿಕ ವ್ಯಾಪಾರಿಗಳಿಗೆ ಕಿರುಕುಳ ನೀಡಿದ್ದಾರೆ. ಅವರಲ್ಲಿ ಹಲವರು ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ಕಾರ್ಮಿಕ ವರ್ಗದ ವಲಯವು ಕಷ್ಟಪಟ್ಟು ದುಡಿಯುವದಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಗೆ ಬೆಂಬಲವಾಗಿದ್ದಾರೆ. ಆದಾಗ್ಯೂ, ಅವರನ್ನು ಬೆಂಬಲಿಸುವ ಬದಲು, ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ, ವಾಣಿಜ್ಯ ತೆರಿಗೆ ಇಲಾಖೆಯು ಈ ವ್ಯವಹಾರಗಳ ತೆರಿಗೆ ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಏನೂ ಮಾಡಿಲ್ಲ. ಅದರ ಬಗ್ಗೆ ಜಾಗೃತಿ ಮೂಡಿಸಲು ಅಥವಾ ಸಹಾಯ ಮಾಡಲೂ ಮುಂದಾಗಿಲ್ಲ. ಇದು ಕೇವಲ ಕೆಟ್ಟ ಅರ್ಥಶಾಸ್ತ್ರವಲ್ಲ, ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ದ್ರೋಹವಾಗಿದೆ. ಜಗತ್ತು ಭಾರತದ ಯುಪಿಐ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಕರ್ನಾಟಕದ ಸಣ್ಣ ವ್ಯಾಪಾರಿಗಳು ಭಯದಿಂದ QR ಕೋಡ್ಗಳನ್ನು ತೆಗೆದುಹಾಕಿ ನಗದು ವ್ಯವಹಾರಕ್ಕೆ ಮರಳುತ್ತಿದ್ದಾರೆ. ನಿಮ್ಮ ನಾಯಕತ್ವದ ಹಣಕಾಸು ಇಲಾಖೆ ಮೌನವಾಗಿದೆ ಎಂದು ನಿಖಿಲ್ ಛೇಡಿಸಿದ್ದಾರೆ.

ಸಣ್ಣ ವ್ಯಾಪಾರ ಪ್ರತಿನಿಧಿಗಳು, ಡಿಜಿಟಲ್ ಪಾವತಿ ಸೌಲಭ್ಯ ನೀಡುವವರು, ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಸೇರಿದಂತೆ ಎಲ್ಲಾ ಪಾಲುದಾರರ ತುರ್ತು ಸಭೆಯನ್ನು ತಕ್ಷಣವೇ ಕರೆಯಬೇಕೆಂದು ನಿಮ್ಮನ್ನು ಒತ್ತಾಯಿಸುತ್ತೇನೆ. ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿರುವ ಲಕ್ಷಾಂತರ ಸಣ್ಣ ಉದ್ಯಮಿಗಳನ್ನು ನಾವು ರಾಜ್ಯದ ಪ್ರಗತಿಯಲ್ಲಿ ದೂರವಿಡಲು ಸಾಧ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

- Advertisement -

Latest Posts

Don't Miss