Wednesday, July 23, 2025

Latest Posts

ಧಂಖರ್ ಬಳಿಕ ನಿತೀಶ್ ಆಗ್ತಾರಾ ಉಪರಾಷ್ಟ್ರಪತಿ? ಏನಿದು ಬಿಹಾರದಲ್ಲಿ ಬಿಜೆಪಿ ಸಿಎಂಗಾಗಿ ಮೋದಿ ಮಹಾ ಪ್ಲ್ಯಾನ್?

- Advertisement -

ಬೆಂಗಳೂರು : ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು ಅನಾರೋಗ್ಯದ ಕಾರಣಕ್ಕೆ ತಮ್ಮ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಆ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ದೇಶಾದ್ಯಂತ ಬಿರುಗಾಳಿಯಂತೆ ಹಬ್ಬಿರುವ ಧನ್‌ಕರ್ ರಾಜೀನಾಮೆ ಸುದ್ದಿಯು ನಾನಾ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಈ ನಡುವೆಯೇ ರಾಜಕೀಯವಾಗಿ ಪ್ರಬಲವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭಾರತದ ಉಪರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಿರ್ಗಮಿತ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು ಕಳೆದ ಸೋಮವಾರ ಸಂಜೆ ರಾತ್ರಿ ಏಕಾಏಕಿಯಾಗಿ ಆರೋಗ್ಯದ ಕಾರಣಗಳನ್ನು ನೀಡಿದ್ದಾರೆ. ಈ ವಿಚಾರ ರಾಜಕೀಯವಾಗಿಯೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇನ್ನೂ ಪ್ರಮುಖವಾಗಿ ಕೆಲ ತಿಂಗಳಲ್ಲಿಯೇ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಹೊಸ ರಾಜಕೀಯ ಆಟವನ್ನು ಆಡಬಹುದು ಎಂಬ ಅಭಿಪ್ರಾಯಗಳು ವ್ಯಾಪಕವಾಗಿವೆ. ಮೋದಿ ಸರ್ಕಾರ ಧನ್‌ಕರ್‌ ಜಾಗದಲ್ಲಿ ನಿತೀಶ್‌ ಕುಮಾರ್‌ ಅವರನ್ನು ತಂದು ಕೂರಿಸುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಸಂಸತ್ತಿನ ಅಧಿವೇಶನ ನಡೆಯುವ ಹೊತ್ತಿನಲ್ಲೇ ಉಪರಾಷ್ಟ್ರಪತಿ ರಾಜೀನಾಮೆಯು ವಿಪಕ್ಷಗಳಿಗೆ ಪ್ರಬಲ ಅಸ್ತ್ರವಾದಂತಾಗಿದೆ. ಈ ಹಿನ್ನೆಲೆಯಲ್ಲಿಯೇ ಇದೇ ವಿಚಾರ ಇಟ್ಟುಕೊಂಡು ಎನ್‌ಡಿಎ ವಿರುದ್ಧ ಮುಗಿಬೀಳುತ್ತಿವೆ.

ನಿತೀಶ್‌ ಕುಮಾರ್‌ ಸದ್ಯ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ. ಕಳೆದ 2005 ರಿಂದಲೂ ಬಿಹಾರದ ಸಿಎಂ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ. ರಾಜಕೀಯದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಮಹಾಮೈತ್ರಿಕೂಟದ ಜೊತೆ ಕೈ ಜೋಡಿಸಿಯೂ ಸಿಎಂ ಕುರ್ಚಿ ಅನುಭವಿಸಿದ್ದಾರೆ. ಆದರೆ ಇದೀಗ ಈ ಬಾರಿಯ ಚುನಾವಣೆಯನ್ನು ಎನ್‌ಡಿಎ ಇದೇ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆಸಲು ಮುಂದಾಗಿದೆ. ನಿತೀಶ್‌ ಮತ್ತೆ ಬಿಹಾರವನ್ನು ಆಳಲಿದ್ದಾರೆ ಎಂಬ ಮಾತುಗಳನ್ನು ಬಿಜೆಪಿ ನಾಯಕರು ಹೇಳುತ್ತಿದ್ದರೂ ಸಹ, ಒಳಗೊಳಗೆಯೇ ತಮ್ಮ ಪಕ್ಷದ ನಾಯಕ ಆ ಸ್ಥಾನದಲ್ಲಿ ಕೂರಬೇಕೆಂಬ ಕನಸು ಹಲವು ವರ್ಷಗಳಿಂದ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಇನ್ನೂ ಒಂದು ವೇಳೆ ಬಿಜೆಪಿ ಹಾಗೂ ಮೋದಿ ಸರ್ಕಾರ ಈ ಆಫರ್‌ ನಿತೀಶ್‌ ಕುಮಾರ್‌ಗೆ ನೀಡಿದರೆ, ಅವರು ಯಾವ ರೀತಿಯಾಗಿ ಪ್ರತಿಕ್ರಿಯಿಸಬಹುದು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಅಲ್ಲದೆ ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತೀಶ್‌, ಉಪರಾಷ್ಟ್ರಪತಿ ಹುದ್ದೆಗೆ ಏರಿದರೆ, ರಾಜಕೀಯದ ಜೊತೆಗೆ ಪಕ್ಷದ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಲವು ವರ್ಷಗಳಿಂದ ಪಕ್ಷದ ಮೇಲೆ ಭಾರೀ ಹಿಡಿತ ಹೊಂದಿರುವ ಬಿಹಾರ ಸಿಎಂಗೆ ತನ್ನ ಪಕ್ಷದ ಜವಾಬ್ದಾರಿಯನ್ನು ದಿಢೀರ್‌ ಆಗಿ ಇನ್ನೊಬ್ಬರ ಹೆಗಲಿಗೆ ಹಾಕುವುದೂ ಸವಾಲಿನ ಕೆಲಸವೇ ಆಗಿದೆ.

ಅಚ್ಚರಿ ಸಂಗತಿಯೆಂದರೆ ಬಿಜೆಪಿಯು ಮೈತ್ರಿ ಧರ್ಮದ ವಿಚಾರದಿಂದ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ್ದರೂ ಸಹ ನಿತೀಶ್‌ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದೆ. ಸದ್ಯಕ್ಕೆ ಬಿಜೆಪಿಯು 80 ಹಾಗೂ ಜೆಡಿಯು 45 ಶಾಸಕರ ಬಲವನ್ನು ಹೊಂದಿದೆ. ಪರಿಸ್ಥಿತಿ ಹೀಗಿರುವಾಗ ಬಿಹಾರದಲ್ಲಿ ಚುನಾವಣೆಗೂ ಮುನ್ನವೇ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದು ಬಿಜೆಪಿ ಮಾಸ್ಟರ್‌ ಸ್ಟ್ರೋಕ್‌ ಆಟಕ್ಕೆ ಮುಂದಾಗಬಹುದಾ ಎಂಬ ಚರ್ಚೆಗಳು ಜೋರಾಗಿದ್ದು, ಇದಕ್ಕೆ ಕಾಲವೇ ಉತ್ತರಿಸಬೇಕಿದೆ.‌

- Advertisement -

Latest Posts

Don't Miss