ಗೃಹಲಕ್ಷ್ಮಿಯರಿಗೆ ಬಂಪರ್ – ಗೃಹಲಕ್ಷ್ಮಿ ಸಂಘದಲ್ಲಿ 5 ಲಕ್ಷ ರೂ. ಸಾಲ ಸಿಗುತ್ತೆ!

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಭಾಗ್ಯ ಸಿಕ್ಕಿದೆ. ಶೂರಿಟಿ ಇಲ್ಲದೆ ಬಡ್ಡಿದರ ಕಡಿಮೆ ಇರುವ ಸಾಲ ಸೌಲಭ್ಯವನ್ನು ಪರಿಚಯಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂತಹದೊಂದು ಅವಕಾಶ ನೀಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ₹5 ಲಕ್ಷವರೆಗೆ ಶೂರಿಟಿ ಇಲ್ಲದ ಸಾಲ ಸಿಗುವ ಅವಕಾಶ ಇದೆ. ಮಹಿಳೆಯರು ಶ್ರಮದಿಂದ, ತಮ್ಮದೇ ಆದ ಉದ್ಯಮ ಆರಂಭಿಸಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಅನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಮಹತ್ತರ ಹೆಜ್ಜೆ ಇಟ್ಟಿದೆ.

ಯೋಜನೆಯ ಉದ್ದೇಶ ಏನು ಅಂದ್ರೆ ಇನ್ನು ಮುಂದೆ ಮಹಿಳೆಯರು ಮನೆಯಲ್ಲೇ ಅಲ್ಲ – ವಾಣಿಜ್ಯ ಕ್ಷೇತ್ರದಲ್ಲೂ ತಮ್ಮ ಸ್ಥಾನವನ್ನು ಸೃಷ್ಟಿಸಿಕೊಳ್ಳಬೇಕು ಅನ್ನೋದು. ಸಾಲದ ವಿವರಗಳನ್ನ ನೋಡೋದಾದ್ರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ₹ 5 ಲಕ್ಷವರೆಗೆ ಸಾಲ ಸಿಗುತ್ತದೆ. ಅದು ಕೂಡಾ ಶೂರಿಟಿ ಇಲ್ಲದೆ. ಸಾಲದ ಬಡ್ಡಿದರ ಇತರ ಯೋಜನೆಗಳಿಗಿಂತ ಕಡಿಮೆ ಇರುತ್ತೆ. ಈ ಯೋಜನೆಯನ್ನು ಅಕ್ಟೋಬರ್ 2025ರಿಂದ ಪ್ರಾಯೋಗಿಕ ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ. ನಂತರದ ಹಂತದಲ್ಲಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗತ್ತೆ.

ಸಂಘದ ರಚನೆ ಅಥವಾ ಹಣಕಾಸು ವ್ಯವಸ್ಥೆ ಹೇಗೆ ಮಾಡಬೇಕು ಅನ್ನೋದನ್ನ ನೋಡೋದಾದ್ರೆ ಗೃಹಲಕ್ಷ್ಮಿ ಫಲಾನುಭವಿಗಳು 4 ರಿಂದ 10 ಮಂದಿ ಸೇರಿ ಒಂದು ಸಂಘ ರೂಪಿಸಬಹುದು. ಪ್ರತಿಯೊಬ್ಬ ಸದಸ್ಯೆ ಮಾಸಿಕ ₹2,000 ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ನಾಲ್ವರ ವಾರ್ಷಿಕ ಹಣ ₹96,000, ಹತ್ತು ಜನರ ವಾರ್ಷಿಕ ಹಣವಾದರೆ ₹2.4 ಲಕ್ಷ ಹಣ ಜೊತೆಗೆ 3-5 ಲಕ್ಷ ಹಣ ಬ್ಯಾಂಕ್ ಗಳಿಂದ ಗುಂಪಿಗೆ ಸಾಲ ಸೌಲಭ್ಯ ಸಿಗಲಿದೆ. ಇದರಿಂದ ಮಹಿಳೆಯರ ಉದ್ಯಮಕ್ಕೆ ಉಪಯೋಗವಾಗಲಿದೆ.

ಶೂರಿಟಿ ಇಲ್ಲದೆ ಸಾಲ ಹೇಗೆ ಸಾಧ್ಯ? ಅಂತ ಕೇಳಿದ್ರೆ ಅದಕ್ಕೆ ಉತ್ತರ ಇಲ್ಲಿದೆ. ಸರ್ಕಾರ ನಬಾರ್ಡ್, ಗ್ರಾಮೀಣ ಬ್ಯಾಂಕ್‌ಗಳು, ಕರ್ನಾಟಕ ಅಪ್ಪೆಕ್ಸ್ ಬ್ಯಾಂಕ್ ಮೊದಲಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಶೂರಿಟಿ ಇಲ್ಲದೇ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಿದೆ.

ಈ ಯೋಜನೆಯಿಂದ ಸುಮಾರು 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಸಾವಿರಾರು ಮಹಿಳೆಯರು ಉದ್ಯಮ ಆರಂಭಿಸುವ ನಿರೀಕ್ಷೆ ಇದೆ. ಈ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಸ್ಥೆಯ 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಆರಂಭಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಸಂಪರ್ಕಿಸಬಹುದು ಅಥವಾ ಗೃಹಲಕ್ಷ್ಮಿ ಸಹಾಯವಾಣಿ 181 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

ವರದಿ : ಲಾವಣ್ಯ ಅನಿಗೋಳ

About The Author