ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ED ರೇಡ್ ದೇಶದ ಆರ್ಥಿಕ ವ್ಯವಹಾರದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಒಡೆತನದ ಕಂಪನಿಗಳ ಸಮೂಹ ಮತ್ತು ಯೆಸ್ ಬ್ಯಾಂಕ್ ಮೇಲೆ ಈ ದಾಳಿ ನಡೆದಿದೆ. 3,000 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾದ SBI, ಈ ಸಾಲ ವಂಚನೆ ಕುರಿತು ಆರ್‌ಬಿಐಗೆ ಅಧಿಕೃತ ವರದಿ ಸಲ್ಲಿಸಿದೆ.
ಗುರುವಾರ, ಜಾರಿ ನಿರ್ದೇಶನಾಲಯದ ಅಧಿಕಾರಿ ತಂಡಗಳು ದೇಶದ 35ಕ್ಕೂ ಹೆಚ್ಚು ಕಡೆಗಳಲ್ಲಿ ಹಠಾತ್ ದಾಳಿ ನಡೆಸಿವೆ. ಇವುಗಳಲ್ಲಿ 50ಕ್ಕೂ ಹೆಚ್ಚು ಕಂಪನಿಗಳು, ಮತ್ತು 25ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಅಧಿಕಾರಿಗಳು ವಿಚಾರಣೆಗೆ ಒಳಪಟ್ಟಿದ್ದಾರೆ.
ಈ ದಾಳಿಗಳು PMLA ಸೆಕ್ಷನ್ 17 ಅಡಿಯಲ್ಲಿ ನಡೆದಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಂತೆ ಕಾರ್ಯಚರಣೆ ನಡೆಸಲಾಗಿದೆ. ಮೂಲಗಳ ಪ್ರಕಾರ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಸೆಬಿ, NFRA, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ಪ್ರಮುಖ ಹಣಕಾಸು ಸಂಸ್ಥೆಗಳು ಸಹ ಈ ತನಿಖೆಗೆ ಮಾಹಿತಿ ಪೂರೈಸಿವೆ.
ಇಡಿಯ ಪ್ರಾಥಮಿಕ ತನಿಖೆ ಬಹುಮಟ್ಟಿಗೆ ಭಾರೀ ಅಕ್ರಮಗಳನ್ನು ಬಿಚ್ಚಿಟ್ಟಿದೆ. ಯೆಸ್ ಬ್ಯಾಂಕ್ ಲಿಮಿಟೆಡ್‌ನ ಪ್ರವರ್ತಕರು, 2017 ರಿಂದ 2019ರ ನಡುವಿನ ಅವಧಿಯಲ್ಲಿ, ಅನಿಲ್ ಅಂಬಾನಿ ಕಂಪನಿಗಳಿಗೆ ಸಾಲ ಬಿಡುಗಡೆ ಮಾಡುವ ಮೊದಲು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸ್ವೀಕರಿಸಿದ್ದಾರೆ ಎಂದು ಪತ್ತೆಯಾಗಿದೆ.
ಸಾಲದ ಹಣವನ್ನು ಅನಿಲ್ ಅಂಬಾನಿ ಕಂಪನಿಗಳ ಮೂಲಕ ಬೇರೆ ಕಂಪನಿಗಳಿಗೆ ವರ್ಗಾಯಿಸಲಾಗಿದ್ದು, ಈ ಕಂಪನಿಗಳ ಪತ್ತೆ ಹಚ್ಚಲಾಗುತ್ತಿದೆ. ಈ ಹಣವನ್ನು ಷೇರುದಾರರಿಗೂ, ಹೂಡಿಕೆದಾರರಿಗೂ ಮರೆಮಾಚಿದ ರೀತಿಯಲ್ಲಿ ಬಳಸಲಾಗಿದೆ ಎಂದು ಶಂಕೆಯಿದೆ. ಅನಿಲ್ ಅಂಬಾನಿ ವಿರುದ್ಧದ ಈ ತನಿಖೆ ಮುಂದೇನು ತರುತ್ತದೆ ಅನ್ನೋದು ಇಡೀ ಉದ್ಯಮ ಮತ್ತು ಹಣಕಾಸು ಜಗತ್ತಿನ ಕುತೂಹಲ ಮೂಡಿಸಿದೆ.