ಬೆಂಗಳೂರು : 2014ರ ಬಳಿಕ ದೇಶದಲ್ಲಿ ಸತತ ಮೂರು ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅತ್ಯಧಿಕ ದಿನಗಳನ್ನು ಪೊರೈಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿರುವ ಮೋದಿ ಇಂದಿಗೆ 4,078 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇನ್ನೂ ಇಂದಿರಾ ಗಾಂಧಿಯವರು 1966ರ ಜನವರಿ ತಿಂಗಳ 24ರಿಂದ 1977 ಮಾರ್ಚ್ 24ರವರೆಗೆ ಪ್ರಧಾನಿಯಾಗಿದ್ದರು. ಅಂದರೆ ಬರೊಬ್ಬರಿ 4,077 ದಿನಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ಅಲ್ಲದೆ ಈ ದೇಶದ ದೀರ್ಘಾವಧಿಯ ಪ್ರಧಾನಿ ಎಂಬ ಹೆಗ್ಗಳಿಕೆ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರಿಗಿದೆ. 1947ರ ಆಗಸ್ಟ್ 15ರಿಂದ 1964ರ ಮೇ 27ರವರೆಗೆ 16 ವರ್ಷ 286 ದಿನಗಳಷ್ಟು ಕಾಲ ನೆಹರೂ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.
ಆದರೆ ನಿರಂತರ ಮೂರು ಅವಧಿಗೆ ಪ್ರಧಾನಿಯಾಗುವ ಮೂಲಕ ಮೋದಿ ಆ ದಾಖಲೆಯನ್ನು ಈಗಾಗಲೇ ತಲುಪಿದ್ದರು. ಹೀಗೆ ನರೇಂದ್ರ ಮೋದಿ ಎಲ್ಲ ಚುನಾವಣೆಗಳಲ್ಲಿ ಗೆಲುವಿನ ಮಾಲೆಯನ್ನು ಧರಿಸುತ್ತಲೇ ಬಂದಿರುವುದು ವಿಶೇಷವಾಗಿದೆ.
ಇನ್ನೂ ಮೋದಿ ದೇಶದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕರಾಗಿದ್ದಾರೆ. ಕಳೆದ 2001ರಲ್ಲಿ ಗುಜರಾತಿನ ಸಿಎಂ ಆಗಿದ್ದ ಬಳಿಕ 2014ರಲ್ಲಿ ಪ್ರಥಮ ಬಾರಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಅಂದಿನಿಂದಲೂ ಇಂದಿನವರೆಗೂ ಅವರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿಲ್ಲ.
ಸತತ ಆರು ಬಾರಿ ಚುನಾವಣೆಗಳಲ್ಲಿ ಗೆಲುವನ್ನು ಕಂಡಿರುವ ಏಕೈಕ ನಾಯಕ ಎಂಬ ಹಿರಿಮೆಯೂ ಮೋದಿಯವರದ್ದಾಗಿದೆ. 2002,2007, ಹಾಗೂ 2012 ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ನಮೋ ಗೆದ್ದು ಬೀಗಿದ್ದರು. ಅಲ್ಲದೆ 2014, 2019 ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲೂ ನರೇಂದ್ರ ಮೋದಿ ತಮ್ಮ ಗೆಲುವನ್ನು ದಾಖಲಿಸಿದ್ದರು.
ಗಮನಾರ್ಹ ಸಂಗತಿಯೆಂದರೆ ಸ್ವಾತಂತ್ರ್ಯದ ಬಳಿಕ ಜನಿಸಿದ ಮೊದಲ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದಿಂದ ಹೊರತಾದ ಅತ್ಯಂತ ದೀರ್ಘಾವಧಿಯ ಪ್ರಧಾನಿಯೂ ಇವರೇ ಆಗಿದ್ದಾರೆ. ಗುಜರಾತ್‌ನಲ್ಲಿ ಜನಿಸಿದ ನಾಯಕ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿ ಮೂರನೇ ಅವಧಿಯಲ್ಲಿ ದಾಖಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದು ವಿಶೇಷ.