ಬೆಂಗಳೂರು : ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರಕ್ಕೆ ಆಯೋಗ ಬಂದಿದೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಖಂಡಿಸಿವೆ. ಈಗಾಗಲೇ ಎಸ್‌ಐಆರ್ ವಿಶೇಷ ತೀವ್ರ ಪರಿಷ್ಕರಣೆಯನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತಿವೆ.
ಇನ್ನೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೇಂದ್ರ ಚುನಾವಣಾ ಆಯೋಗದ ಈ ನಡೆಯನ್ನು ಕಟವಾಗಿ ಟೀಕಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಚುನಾವಣೆ ಬಹಿಷ್ಕಾರದ ಬಗ್ಗೆಯೂ ಚಿಂತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಬಿಹಾರ ಹಾಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ ಇದೀಗ ಈ ಅಖಾಡಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಳಿದಿದ್ದು, ಆರ್‌ಜೆಡಿ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ಟಾಲಿನ್, ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಅನ್ನು ದುರ್ಬಳಕೆ ಮಾಡಿಕೊಂಡು ಅನನುಕೂಲಕರ ಮತ್ತು ಭಿನ್ನಾಭಿಪ್ರಾಯ ಇರುವ ಸಮುದಾಯಗಳ ಮತದಾರರನ್ನು ಸದ್ದಿಲ್ಲದೆ ಅಳಿಸಿಹಾಕಲಾಗುತ್ತಿದೆ. ಇದೆಲ್ಲ ಬಿಜೆಪಿ ಪರವಾಗಿ ಸಮತೋಲನ ಕಾಪಾಡಲು ಏಕಮುಖವಾಗಿ ನಡೆಯುತ್ತಿದೆ. ಇದು ಸುಧಾರಣೆಯ ಬಗೆ ಅಲ್ಲ. ಇದೊಂದು ಫಲಿತಾಂಶಕ್ಕಾಗಿ ಮಾಡುವ ಎಂಜಿನಿಯರಿಂಗ್ ಆಗಿದೆ ಎಂದು ಕಿಡಿಕಾರಿದ್ದಾರೆ.
ಬಿಹಾರದಲ್ಲಿ ನಡೆದದ್ದೇನೆಂದರೆ, ದೆಹಲಿಯಲ್ಲಿ ಕುಳಿತಿರುವ ಆಡಳಿತಕ್ಕೆ ಒಮ್ಮೆ ತನಗೆ ಮತ ಹಾಕಿದ ಅದೇ ಮತದಾರರು ಈಗ ತಮ್ಮನ್ನು ಹೊರಗಿಡುತ್ತಾರೆಂದು ತಿಳಿದಿದೆ. ಅದಕ್ಕಾಗಿಯೇ ಅವರು ಮತ ಚಲಾಯಿಸುವುದನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸುತ್ತಿದ್ದಾರೆ. ನೀವು ನಮ್ಮನ್ನು ಸೋಲಿಸಲು ಸಾಧ್ಯವಾಗದಿದ್ದರೆ, ನೀವು ನಮ್ಮನ್ನು ಅಳಿಸಲು ಪ್ರಯತ್ನಿಸುತ್ತಿದ್ದೀರಿ. ಬೆಂಕಿಯೊಂದಿಗೆ ಆಟವಾಡಬೇಡಿ. ನಮ್ಮ ಪ್ರಜಾಪ್ರಭುತ್ವಕ್ಕೆ ಯಾವುದೇ ಬೆದರಿಕೆ ಬಂದರೆ ಅದನ್ನು ದೃಢವಾಗಿ ಎದುರಿಸಬೇಕಾಗುತ್ತದೆ ಎಂದು ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ತನ್ನ ಪೂರ್ಣ ಬಲದಿಂದ ಧ್ವನಿ ಎತ್ತುತ್ತದೆ. ನಮ್ಮಲ್ಲಿರುವ ಪ್ರತಿಯೊಂದು ಪ್ರಜಾಪ್ರಭುತ್ವ ಅಸ್ತ್ರವನ್ನು ಬಳಸಿಕೊಂಡು ನಾವು ಈ ಅನ್ಯಾಯದ ವಿರುದ್ಧ ಹೋರಾಡುತ್ತೇವೆ. ಸಂವಿಧಾನವನ್ನು ನಂಬುವ ಪ್ರತಿಯೊಬ್ಬ ನಾಗರಿಕನಿಗೆ: ಇದು ಕೇವಲ ಒಂದು ರಾಜ್ಯದ ಬಗ್ಗೆ ಅಲ್ಲ, ಇದು ನಮ್ಮ ಗಣರಾಜ್ಯದ ಅಡಿಪಾಯದ ಬಗ್ಗೆ. ಪ್ರಜಾಪ್ರಭುತ್ವ ಜನರಿಗೆ ಸೇರಿದ್ದು. ಅದನ್ನು ಕದಿಯಲಾಗುವುದಿಲ್ಲ ಎಂದು ಸಿಎಂ ಸ್ಟಾಲಿನ್ ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.