ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಯಲ್ಲಿ, ಬಹುಮತವಿದ್ದರೂ ಸದಸ್ಯರು ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಸದ ಕಾರಣ, ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ. ಮಂಜೇಶ್ ಚನ್ನಾಪುರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಜುಲೈ 10ರಂದು ಚುನಾವಣೆ ನಿಗದಿಯಾಗಿತ್ತು. ಪಂಚಾಯಿತಿಯಲ್ಲಿ 13 ಸದಸ್ಯರ ಪೈಕಿ, 11 ಕಾಂಗ್ರೆಸ್ ಬೆಂಬಲಿತ ಮತ್ತು ಇಬ್ಬರು ಜೆಡಿಎಸ್ ಬೆಂಬಲಿತರಿದ್ದಾರೆ.
ಕಾಂಗ್ರೆಸ್ ಬೆಂಬಲಿತ 11 ಸದಸ್ಯರು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಬಳಿ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಚರ್ಚೆಗೆ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಇಬ್ಬರು ಸದಸ್ಯರ ನಡುವಿನ ಪೈಪೋಟಿಯಲ್ಲಿ ನಿರ್ಧಾರದ ವಿಳಂಬವಾಗಿದ್ದು, ಬೆಂಗಳೂರಿನಿಂದ ವಾಪಸ್ ಬರುವುದರೊಳಗೆ ನಾಮಪತ್ರ ಸಲ್ಲಿಕೆ ಸಮಯ ಮೀರಿತ್ತು. ಇದೇ ಸಮಯ ಬಳಸಿಕೊಂಡ ಜೆಡಿಎಸ್ ಬೆಂಬಲಿತ ಸದಸ್ಯ ಹಡೇನಹಳ್ಳಿ ಉಮೇಶ್, ಮತ್ತೊಬ್ಬ ಸದಸ್ಯರ ಜೊತೆಗೂಡಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈಗ ನಾಮಪತ್ರ ಸ್ವೀಕೃತವಾಗಿತ್ತು. ಅಧ್ಯಕ್ಷರ ಘೋಷಣೆಗಾಗಿ ಕರೆದ ಮೊದಲ ಸಭೆಗೆಮ ಸದಸ್ಯರು ಗೈರಾಗಿದ್ದರು. ಗುರುವಾರ ಎರಡನೇ ಸಭೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಆಗಲೂ ಸದಸ್ಯರು ಗೈರು ಹಾಜರಾಗಿದ್ದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ಸೆಕ್ಷನ್ 53ರಂತೆ ಮುಂದೂಡಲ್ಪಟ್ಟಿದ್ದ ಎರಡನೇ ಸಭೆಯಲ್ಲೂ, ಕೋರಂ ಇಲ್ಲದ್ದರಿಂದ ಅಧ್ಯಕ್ಷರ ಆಯ್ಕೆಯನ್ನು ಸಿಂಧು ಮಾಡಲಾಯಿತು. ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಅವರು, ಸದಸ್ಯರ ಗೈರಿನಲ್ಲಿ ಹಡೇನಹಳ್ಳಿ ಉಮೇಶ್ ಅವರ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷರಾದ ಬಳಿಕ ಮಾತನಾಡಿದ ಹಡೇನಹಳ್ಳಿ ಉಮೇಶ್, ಇದು ಪ್ರಜಾಪ್ರಭುತ್ವ ಮತ್ತು ಕಾನೂನಿನ ಗೆಲುವು. ನನ್ನ ನಾಮಪತ್ರ ಸಲ್ಲಿಕೆಯ ಸಮಯ ಮತ್ತು ಆಯ್ಕೆಯು ಗೋಲ್ಡನ್ ಹವರ್ ಆಗಿತ್ತು. ನಿಯಮದಂತೆ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಿದ್ದರು. ಸದಸ್ಯರು ಗೈರಾದ ಹಿನ್ನೆಲೆಯಲ್ಲಿ ನಿಯಮಾನುಸಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ನನ್ನ ಆಯ್ಕೆ ನಡೆದಿದೆ ಎಂದು ಹೇಳಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ