ಮೈಸೂರು : ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಹೋಲಿಸಲಾಗಿತ್ತು. ಖುದ್ದು ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಈ ಮಹಾರಾಜರಿಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿವೆ.
ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಹೀಗೆಲ್ಲ ಮಾತನಾಡೋರನ್ನು ಎಚ್.ಎಂ. ಅಂತ ಕರೆಯುತ್ತಾರೆ ಎಂದು ಲೇವಡಿ ಮಾಡಿದ್ದರು. ಹುಚ್ಚು ಮುಂಡೇ ಮಕ್ಳು ಅಂತ ಹೇಳ್ತಾರೆ ಎಂದಿದ್ದರು. ಇನ್ನೂ ಮೊದಲು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡೋದಿಲ್ಲ. ನಾವು ಬಿಜೆಪಿ ಪಕ್ಷದವರಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ. ಬಿಜೆಪಿ ಪಕ್ಷದವರು ಏನೂ ಮಾಡಿಲ್ಲ, ನಾವು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ಮಗನ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು.
ಆದರೆ ತಮ್ಮ ಹೇಳಿಕೆಗೆ ಇದೀಗ ಯತೀಂದ್ರ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆಯನ್ನು ಬೇರೆ ರೀತಿಯಾಗಿ ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೂ ನಾನು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ನಾಲ್ವಡಿ ಅವರಂತೆ ನಮ್ಮ ತಂದೆಯೂ ಕೂಡ ಹಲವಾರು ಕೊಡುಗೆಗಳನ್ನ ಕೊಟ್ಟಿದ್ದಾರೆ. ಬೇಕಾದರೆ ದಾಖಲೆ ಕೊಡುತ್ತೇನೆ, ನಮ್ಮ ತಂದೆ ಏನು ಮಾಡಿದ್ದಾರೆ. ಯಾವ ಕೊಡುಗೆ ನೀಡಿದ್ದಾರೆ ಎನ್ನುವುದಕ್ಕೆ ಅಂಕಿ ಅಂಶಗಳನ್ನ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಮ್ಮ ತಂದೆಯವರು ಏನು ಮಾಡಿದ್ದಾರೆ? ಎಷ್ಟು ಕೆಲಸಗಳನ್ನ ಮಾಡಿದ್ದಾರೆ ಎಲ್ಲಾದಕ್ಕೂ ಸಾಕ್ಷಿಗಳಿವೆ. ನನ್ನ ಹೇಳಿಕೆಯನ್ನು ಈ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲ ಬಹಿರಂಗ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ.