ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ರೈತರಿಗೆ ಅಗತ್ಯವಾದ ಗೊಬ್ಬರವನ್ನೂ ಕೇಂದ್ರ ಸರ್ಕಾರ ಸರಬರಾಜು ಮಾಡಿಲ್ಲ. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಬಿಜೆಪಿ ಸಂಸದರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ
ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1,146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಒಂದು ಕಾರ್ಯಕ್ರಮದ ಭಾಗವಾಗಿ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಯಿತು. ಫಲಾನುಭವಿಗಳಿಗೆ ಸವಲತ್ತುಗಳನ್ನು ಹಂಚಿ ಮಾತನಾಡಿದ ಅವರು, ಇದು ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬದ್ಧತೆಯ ಸಾಕ್ಷಿ ಎಂದು ಹೇಳಿದರು.
ಒಂದೇ ದಿನದಲ್ಲಿ 1,146 ಕೋಟಿ ರೂ. ಕಾಮಗಾರಿಗಳನ್ನು ಆರಂಭಿಸಿದ್ದೇವೆ. ಕೇಂದ್ರ ಸರ್ಕಾರ ಗೊಬ್ಬರ ನೀಡಲು ವಿಫಲವಾಗಿದ್ದು, ಬಿಜೆಪಿ ಸಂಸದರು ಮಧ್ಯಪ್ರವೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ ಗೊಬ್ಬರವನ್ನು ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಸರ್ಕಾರ ಒಂದು ವಾರದ ಹಿಂದೆ ಪತ್ರ ಬರೆದು ಈ ಬಗ್ಗೆ ಕೇಂದ್ರವನ್ನು ಒತ್ತಾಯಿಸಿದೆ. ಆದರೆ ಇನ್ನೂ ಪ್ರತಿಕ್ರಿಯೆಯೇ ಇಲ್ಲ, ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ವಿವಿಧ ನೆರವಿನ ಯೋಜನೆಗಳ ವಿವರವನ್ನೂ ನೀಡಿದರು. ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ನಿಭಾಯಿಸಿದವರು ತಮ್ಮ ಸರ್ಕಾರವೇ ಎಂದು ನೆನಪಿಸಿದರು.ಗಾಗಲೇ ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂ. ಇತ್ತೀಚೆಗೆ ಮತ್ತೆ 10 ಕೋಟಿ ರೂ. ನೀಡಲಾಗಿದೆ. ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರೂ. ಸಹಾಯಧನ ಒದಗಿಸುವ ನಿರ್ಧಾರ ಕೂಡ ನಮ್ಮ ಸರ್ಕಾರದದ್ದೇ ಎಂದು ಹೇಳಿದರು.
ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ಕೊಳ್ಳುವ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಶಕ್ತಿ ಬಂದಿದೆ. ಪರಿಣಾಮ ಇಡೀ ದೇಶದಲ್ಲಿ ರಾಜ್ಯದ ತಲಾ ಆದಾಯ ನಂಬರ್ ಒನ್ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು.

